
ಧಾರವಾಡ: ನಗರದ ಕರ್ನಾಟಕ ಮಹಾವಿದ್ಯಾಲಯದ (ಕೆಸಿಡಿ) ‘ಕಾವೇರಿ’ ಹಾಸ್ಟೆಲ್‌ನಲ್ಲಿ ಕಳಪೆ ಆಹಾರ, ಸ್ವಚ್ಛತೆ ಕೊರತೆ ಹಾಗೂ ಹಲವು ಅವ್ಯವಸ್ಥೆ ಉಂಟಾಗಿದ್ದು ತಕ್ಷಣ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಎದುರು ಸಮಾವೇಶಗೊಂಡ ವಿದ್ಯಾರ್ಥಿನಿಯರು ಹಾಗೂ ಎಬಿವಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು.
‘ಕಾವೇರಿ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಶೌಚಾಲಯಗಳು ಬ್ಲಾಕ್ ಆಗಿವೆ. ಚಾವಣಿ ಹಾಳಾಗಿ ಸಿಮೆಂಟ್ ಚೂರು ಉದುರುತ್ತಿವೆ’ ಎಂದು ಪ್ರತಿಭಟನಕಾರರು ದೂರಿದರು.
‘ಹಾಸ್ಟೆಲ್‌ನಲ್ಲಿ ನೀಡುವ ಉಪಾಹಾರದಲ್ಲಿ ಕೆಲವೊಮ್ಮೆ ಹುಳಗಳು, ಕೂದಲುಗಳು ಇರುತ್ತವೆ. ಆಹಾರದ ಗುಣಮಟ್ಟವೂ ಚೆನ್ನಾಗಿಲ್ಲ. ವಸತಿ ನಿಲಯ ಆವರಣದಲ್ಲಿ ಸ್ವಚ್ಛತೆ ಇಲ್ಲ. ಕೆಲವೆಡೆ ಗಿಡಗಂಟಿಗಳು ಬೆಳೆದಿವೆ. ಹುಳಹುಪ್ಪಟೆಗಳು ಓಡಾಡುತ್ತವೆ. ಮೂಲಸೌಕರ್ಯಗಳ ಕೊರತೆ ಇದೆ’ ಎಂದು ಆರೋಪಿಸಿದರು.
‘ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಪರಿಹಾರಕ್ಕೆ ಕ್ರಮ ವಹಿಸಿಲ್ಲ’ ಎಂದು ದೂರಿದರು.
‘ಹಾಸ್ಟೆಲ್‌ನಲ್ಲಿ ಮೂಲಸೌಕರ್ಯಗಳ ಕೊರತೆ ನಿವಾರಿಸಲು ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗವುದು’ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.
ದರ್ಶನ್ ಹೆಗಡೆ, ಸಚಿನ್ ಕೋಟ್ಯಾಳ, ಅಭಿಷೇಕ್ ದೊಡ್ಡಮನಿ, ಸೋಹನ್ ಮಲ್ಲಾಡ ಪ್ರತಿಭಟನೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.