
ಧಾರವಾಡ: ಮೌಲ್ಯಗಳು, ಸಂಸ್ಕೃತಿಯನ್ನು ರೂಪಿಸುವ ನಿಟ್ಟಿನಲ್ಲಿ ಸಾಹಿತ್ಯವು ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಧ್ಯಯನ ಆಸಕ್ತಿಯನ್ನು ಬೆಳೆಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಮಾಳವಿಯಾ ಮಿಷನ್ ಟೀಚರ‍್ಸ್ ಟ್ರೇನಿಂಗ್ ಸೆಂಟರ್ ವತಿಯಿಂದ ನಡೆದ ಕನ್ನಡ ಪ್ರಾಧ್ಯಾಪಕರ ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ವಿದ್ಯಾರ್ಥಿಗಳಲ್ಲಿ ಅಧ್ಯಯನ ಕಡಿಮೆಯಾಗುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅಧ್ಯಯನ ಆಸಕ್ತಿಯನ್ನು ಬೆಳೆಸಬೇಕು. ಪಾಠ ಬೋಧನೆ ಮಾತ್ರವಲ್ಲ ಸಾಹಿತ್ಯದ ಮೂಲಕ ಪ್ರಗತಿಶೀಲ ಚಿಂತನೆ, ಕುತೂಹಲ ಬೆಳೆಸಬೇಕು’ ಎಂದರು.
‘ಸಾಹಿತ್ಯವನ್ನು ಆಕರ್ಷವಾಗಿ ಬೋಧಿಸುವ ನಿಟ್ಟಿನಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ವಿಷಯಗಳನ್ನು ಮನದಟ್ಟು ಮಾಡಿಸಬೇಕು’ ಎಂದು ಹೇದರು.
ಅಧ್ಯಕ್ಷತೆ ವಹಿಸಿದ್ದ ಮಾಳವಿಯಾ ಸೆಂಟರ್ ನಿರ್ದೇಶಕ ಬಿ. ಎಚ್.ನಾಗೂರು ಮಾತನಾಡಿ, ‘ಅಧ್ಯಾಪಕರು ನಿರಂತರ ಜ್ಞಾನಾಭಿವೃದ್ಧಿಗೆ ಗಮನ ಹರಿಸಬೇಕು. ಶಿಬಿರದಲ್ಲಿ ತರಬೇತಿ ಪಡೆದ ಶಿಕ್ಷಕರು ತರಗತಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿದರೆ ತರಬೇತಿ ಉದ್ದೇಶ ಸಾರ್ಥಕವಾಗುತ್ತದೆ’ ಎಂದರು.
ಶಿಬಿರದಲ್ಲಿ ಭಾಗವಹಿಸಿದ ಪ್ರಾಧ್ಯಾಪಕರಿಗೆ ಪ್ರಮಾಣಪತ್ರ ನೀಡಲಾಯಿತು. ಶಿಬಿರದ ಸಂಯೋಜಕ ನಿಂಗಪ್ಪ ಮುದೇನೂರು, ಅನಸೂಯಾ ಕಂಬಳೆ, ಎಂ.ಡಿ.ಒಕ್ಕುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.