ನವಲಗುಂದ: 24×7 ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಾಗಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ತೆಗ್ಗು ತೆಗೆದು ಹಾಗೆ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಸಮಾಜ ಪರಿವರ್ತನಾ ಸಂಘ ತಹಶೀಲ್ದಾರ್ ಸುಧೀರ್ ಸಾಹುಕಾರ್‌ಗೆ ಮನವಿ ಸಲ್ಲಿಸಿತು.
ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಿಂದ ಎಲ್ಲಿ ಬೇಕು ಅಲ್ಲಿ ತೆಗ್ಗು ಅಗೆದು ಬಿಡುವುದು, ಮುಚ್ಚಿರುವ ತೆಗ್ಗು ಕುಸಿದಿರುವುದು, ಮೊದಲಿನ ಒಡೆದ ನಳದ ನೀರಿನ ಪೈಪ್‌ಗಳನ್ನು ಹಾಗೆ ಬಿಟ್ಟಿರುವುದರಿಂದ ತೆಗ್ಗಿನಲ್ಲಿ ಮಳೆನೀರು ತುಂಬಿಕೊಂಡು ಬೈಕ್ ಸವಾರರು ತೊಂದರೆ ಅನುಭವಿಸುವಂತಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಾಮಗಾರಿಯ ಕುರಿತು ಯಾವುದೇ ನಾಮಫಲಕ ಹಾಕದೆ ಬೇಜವಾಬ್ದಾರಿ ತೋರಿರುವುದರಿಂದ ಜನರು ತೊಂದರೆಪಡುವಂತಾಗಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಸ್ಥಳೀಯ ಪುರಸಭೆಯವರಿಗೆ ಕೇಳಿದರೆ ಕಾಮಗಾರಿ ತಮ್ಮ ಅಧೀನದಲ್ಲಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಒಟ್ಟಾರೆ ಈ ಕಾಮಗಾರಿ ನಿರ್ವಹಿಸುತ್ತಿರುವಂತಹ ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ರಿಯಾಜಅಹ್ಮದ ನಾಶಿಪುಡಿ, ಈರಣ್ಣ ಪೂಜಾರ, ಬಾಬುಶಾ ಮಕಾಂದಾರ, ಮಂಜುನಾಥ ಹೆಬ್ಬಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.