ಸರ್ಕಸ್ ಕಲಾವಿದರ ವಿಶಿಷ್ಟ ಭಂಗಿ
ಹುಬ್ಬಳ್ಳಿ: ‘ನಮ್ಮ ಅಜ್ಜ–ಅಜ್ಜಿ ಅಷ್ಟೇ ಅಲ್ಲ, ತಂದೆ–ತಾಯಿ ಕೂಡ ಸರ್ಕಸ್‌ನಲ್ಲಿ ಇದ್ದರು. ಹಲವು ವರ್ಷ ಬೇರೆ ಬೇರೆ ಕಡೆ ದುಡಿದು, ತಾವೇ ದೊಡ್ಡ ಸರ್ಕಸ್ ಕಂಪನಿ ಸ್ಥಾಪಿಸಿದರು. ಆಗ ಸಿಕ್ಕ ಆಶ್ರಯ ಈಗಲೂ ಮುಂದುವರೆದಿದೆ. ನಮಗೆ ಸರ್ಕಸ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬೇರೆ ಕೆಲಸವೂ ಬಾರದು’.
ಹೀಗೆ ಹೇಳುವಾಗ ರಫೀಕ್ ಶೇಖ್ ಕಣ್ಣಂಚಿನಲ್ಲಿ ನೀರಿತ್ತು. ಮಹಾರಾಷ್ಟ್ರದ ಸೊಲ್ಲಾಪುರ ಊರಿನ ದಿ ಗ್ರೇಟ್ ರಾಜ್‌ಕಮಲ್ ಸರ್ಕಸ್‌ನ ಮಾಲೀಕರಾದ ಅವರು ತಮ್ಮ ಬಾಲ್ಯ ಮತ್ತು ನಂತರದ ಬದುಕನ್ನು ಸರ್ಕಸ್‌ನಲ್ಲೇ ಕಳೆದಿದ್ದಾರೆ. ಕುಟುಂಬದ ಪರಂಪರೆಯಾಗಿರುವ ಸರ್ಕಸ್ ಉಳಿಸಿ, ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ರಾಜ್‌ಕಮಲ್ ಸರ್ಕಸ್‌ನ ಹಲವಾರು ಕಲಾವಿದರು ಮತ್ತು ಸಿಬ್ಬಂದಿ ಇಂಥದ್ದೇ ಕೌಟಂಬಿಕ ಹಿನ್ನೆಲೆಯುಳ್ಳವರು. ಅವರ ತಂದೆ–ತಾಯಿ ಅಥವಾ ಕುಟುಂಬದ ಇತರೆ ಸದಸ್ಯರು ಒಂದಿಲ್ಲೊಂದು ಸ್ವರೂಪದಲ್ಲಿ ಸರ್ಕಸ್ ಜೊತೆ ನಿಕಟ ಸಂಬಂಧವುಳ್ಳವರು. ನೋವು–ನಲಿವು ಇಲ್ಲೇ ಉಂಡವರು.
ಮನರಂಜನಾ ಮತ್ತು ಸಾಹಸ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತು ಹೊಂದಿರುವ ಸರ್ಕಸ್, ವಿಶಿಷ್ಟ ಇತಿಹಾಸ ಹೊಂದಿದೆ. ಒಂದಾನೊಂದು ಕಾಲದಲ್ಲಿ ದೇಶದಲ್ಲಿ 400ಕ್ಕೂ ಹೆಚ್ಚು ಸರ್ಕಸ್ ಕಂಪನಿಗಳಿದ್ದವು. ಈಗ ಬೆರಳೆಣಿಕೆಯಷ್ಟು ಉಳಿದಿದ್ದು, ಜನರನ್ನು ರಂಜಿಸುವ ಕೆಲಸ ನಿರಂತರ ಮಾಡುತ್ತಿವೆ.
ಕಠಿಣ ಕಾನೂನು ಕ್ರಮ: ‘ವರ್ಷಗಳು ಕಳೆದಂತೆ ಸರ್ಕಸ್‌ನ ಸ್ವರೂಪ ಬದಲಾಯಿತು. 200ಕ್ಕೂ ಹೆಚ್ಚು ಕಲಾವಿದರು, 100ಕ್ಕೂ ಹೆಚ್ಚು ವನ್ಯಪ್ರಾಣಿ ಸೇರಿ ಇತರೆ ಪ್ರಾಣಿ, ಪಕ್ಷಿಗಳು ಇರುತ್ತಿದ್ದವು. ಆದರೆ, ಆರ್ಥಿಕ ಮುಗ್ಗಟ್ಟು ಮತ್ತು ಕಠಿಣ ಕಾನೂನು ಕ್ರಮಗಳು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿತು. ಕಾನೂನುಗಳಿಂದ ಪ್ರಾಣಿ, ಪಕ್ಷಿಗಳ ಬಳಕೆ ನಿಷೇಧವಾದರೆ, ಆರ್ಥಿಕ ಸಮಸ್ಯೆಯಿಂದ ಕೆಲ ಸಿಬ್ಬಂದಿ ಬೇರೆ ಉದ್ಯೋಗ ಕಂಡುಕೊಂಡರು’
ಎಂದು ರಫೀಕ್ ಶೇಖ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರ್ಕಸ್‌ನಲ್ಲಿ ಕಲಾವಿದರ ಕಸರತ್ತು ಅಲ್ಲದೇ ಪ್ರಾಣಿ, ಪಕ್ಷಿಗಳನ್ನು ನೋಡಲೆಂದೇ ಮಕ್ಕಳು ಸೇರಿ ಹಿರಿಯರು ಬರುತ್ತಿದ್ದರು. ಅಪರೂಪದ ಪ್ರಾಣಿ, ಪಕ್ಷಿಗಳನ್ನು ಕಂಡು ಬೆರಗಾಗುತ್ತಿದ್ದರು, ಸಂಭ್ರಮಿಸುತ್ತಿದ್ದರು. ಆದರೆ, ಈಗ ಕಲಾವಿದರ ಕಸರತ್ತು ಮಾತ್ರ ನೋಡಿ ಸಂತೃಪ್ತರಾಗಬೇಕಿದೆ. ಪ್ರಾಣಿ, ಪಕ್ಷಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಸರ್ಕಾರಿ ಅಧಿಕಾರಿಗಳು ಮತ್ತು ಪಶುವೈದ್ಯರು ನಿರಂತರ ನಿಗಾ ವಹಿಸಬಹುದು. ಪ್ರಾಣಿಗಳ ಬಳಕೆಗೆ ಅವಕಾಶ ಮಾಡಿಕೊಡುವಂತೆ ಕೋರಿ ದರೂ ಕಾನೂನಿನಲ್ಲಿ ಯಾವುದೇ ರಿಯಾಯಿತಿ ಸಿಕ್ಕಿಲ್ಲ’ ಎಂದು ಅವರು ಹೇಳಿದರು.
‘ಟಿವಿ, ಸಿನಿಮಾ, ಮೊಬೈಲ್ ಗಳ ಆಕರ್ಷಣೆಯಿಂದ ದೂರ ವಿರಿಸಿ ಜನರನ್ನು ಕನಿಷ್ಠ ಎರಡೂವರೆ ಗಂಟೆ ರಂಜಿಸಲು ಕಲಾವಿದರು ಪ್ರಾಣವನ್ನು ಪಣಕ್ಕಿಟ್ಟು ಬಗೆಬಗೆಯ ಕಸರತ್ತು ಪ್ರದರ್ಶಿಸುತ್ತಾರೆ. ದಿನಕ್ಕೆ 3 ಪ್ರದರ್ಶನ ಆಟಗಳು ಇರುತ್ತವೆ. ಪ್ರತಿ ಬಾರಿಯೂ ಕಲಾ ವಿದರು ಹೊಸ ದನ್ನೇ ಮಾಡಿ, ತೋರಿಸಬೇಕು. ಸ್ವಲ್ಪ ತಪ್ಪಿದರೂ ಅಥವಾ ಸಮಸ್ಯೆಯಾದರೂ ಕಲಾವಿದರ ಪ್ರಾಣಕ್ಕೆ ಎರವಾಗಬಹುದು. ಕಲಾವಿದರ ಪಾಲಿಗೆ ಸವಾಲು, ಸಾಹಸವೇ ಬದುಕು’ ಎಂದರು.
ಛೋಟಾ ಇಂಡಿಯಾ: ‘ರಾಜ್‌ಕಮಲ್ ಸರ್ಕಸ್‌ನಲ್ಲಿ ದೇಶದ ಎಲ್ಲಾ ರಾಜ್ಯಗಳ ಕಲಾವಿದರು ಮತ್ತು ಸಿಬ್ಬಂದಿ ಇದ್ದಾರೆ. ಅಸ್ಸಾಂ, ಸಿಕ್ಕಿಂ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯದವರು ಇದ್ದಾರೆ. ನಮ್ಮದು ಒಂದರ್ಥದಲ್ಲಿ ಚೋಟಾ ಇಂಡಿಯಾ ಇದ್ದಂತೆ. ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಬೇರೆ ಬೇರೆ ರಾಜ್ಯಗಳ ಊರುಗಳಲ್ಲಿ ಕ್ಯಾಂಪ್ ಮಾಡುತ್ತೇವೆ. ವ್ಯಾಪಕ ಪ್ರಚಾರ ಮಾಡುತ್ತೇವೆ’ ಎಂದು ಸರ್ಕಸ್‌ನ ವ್ಯವಸ್ಥಾಪಕ ಕೆ.ರಾಮರಾಜು ತಿಳಿಸಿದರು.
‘ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟ ಮತ್ತು ನಷ್ಟ ಅನುಭವಿಸಿದೆವು. ಪ್ರದರ್ಶನ ನೀಡಿದರಷ್ಟೇ ನಮ್ಮ ಬದುಕು ಸಾಗುತ್ತದೆ. ಆಗ ಪ್ರದರ್ಶನ ನೀಡಲಾಗದೇ ಮತ್ತು ಮತ್ತು ಆರ್ಥಿಕ ಸ್ಥಿರತೆಯೂ ಕಾಯ್ದುಕೊಳ್ಳಲು ಆಗದೇ ಸಂಕಷ್ಟ ಅನುಭವಿಸಿದೆವು. ಮಾಲೀಕರು ಹಲವು ಸಮಸ್ಯೆ, ಸವಾಲುಗಳ ಮಧ್ಯೆಯೇ ಎಲ್ಲವನ್ನೂ ನಿಭಾಯಿಸಿದರು’ ಎಂದರು.
ರಿಂಗ್‌ನಲ್ಲಿ ಕಸರತ್ತು ಪ್ರದರ್ಶಿಸುವ ಕಲಾವಿದೆ
ಮೊನಚಾದ ಚಾಕುಗಳಲ್ಲೇ ಕಸರತ್ತು ಪ್ರದರ್ಶನ –
ಜನರನ್ನು ರಂಜಿಸುವ ಜೋಕರ್ಗಳು
ಬೆರಗು ಮೂಡಿಸುವ ಕಸರತ್ತು
ದಿ ಗ್ರೇಟ್ ರಾಜ್‌ಕಮಲ್ ಸರ್ಕಸ್‌ನಲ್ಲಿ 80ಕ್ಕೂ ಹೆಚ್ಚು ಕಲಾವಿದರು ಮತ್ತು ಸಿಬ್ಬಂದಿ ಇದ್ದಾರೆ. ಬೆಂಕಿಯನ್ನು ಕೈಯಲ್ಲಿ ಹಿಡಿದು ಕರಾಮತ್ತು ಪ್ರದರ್ಶಿಸುವುದು,
ಹಗ್ಗ ಮತ್ತು ಬಟ್ಟೆ ನೆರವಿನಿಂದ ಎತ್ತರಕ್ಕೇರಿ ಕಸರತ್ತು ಪ್ರದರ್ಶಿಸುವುದು,
ಪುಟಾಣಿ ರಿಂಗ್‌ನಲ್ಲಿ ಪಟಪಟನೇ ಪಲ್ಟಿ ಹೊಡೆಯುವುದು,
ಜೋಕರ್‌ಗಳ ಹಾಸ್ಯ ಹೀಗೆ ಬಗೆಬಗೆಯ ಕಸರತ್ತುಗಳ ಪ್ರದರ್ಶನ ಖುಷಿ ಕೊಡುವುದರ ಜೊತೆ ಬೆರಗು ಮೂಡಿಸುತ್ತವೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಬರುವ ಮಕ್ಕಳು ಸಂಭ್ರಮಿಸುತ್ತಾರೆ. ಧಾರವಾಡ ಸಮೀಪದ ನವಲೂರು ಬಳಿ ಸರ್ಕಸ್ ಕ್ಯಾಂಪ್‌ವಿದ್ದು, ಪ್ರತಿ ದಿನ ಮಧ್ಯಾಹ್ನ 1, ಸಂಜೆ 4 ಮತ್ತು 7 ಗಂಟೆಗೆ ಪ್ರದರ್ಶನ ಇರುತ್ತದೆ.
1969ರಲ್ಲಿ ಅಜ್ಜ ಲಾಡ್ಲೆಸಾಬ್ ಸ್ಥಾಪಿಸಿದ ಸರ್ಕಸ್‌ನ್ನು ತಂದೆ ಅಲಿ ಸಾಬ್ ಮುಂದುವರಿಸಿದರು. ಈಗ ಸವಾಲು, ಸಮಸ್ಯೆಗಳ ನಿಭಾಯಿಸುತ್ತ ಸರ್ಕಸ್ ಪ್ರದರ್ಶನ ಮುಂದುವರಿಸಿರುವೆರಫೀಕ್ ಶೇಖ್, ಮಾಲೀಕ, ದಿ ಗ್ರೇಟ್ ರಾಜ್‌ಕಮಲ್ ಸರ್ಕಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.