ADVERTISEMENT

ಮಠಾಧಿಪತಿಯಾಗಲು ಬಂದಿಲ್ಲ: ದಿಂಗಾಲೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 9:32 IST
Last Updated 18 ಫೆಬ್ರುವರಿ 2020, 9:32 IST
ಹುಬ್ಬಳ್ಳಿ ನಾಗಶೆಟ್ಟಿಕೊಪ್ಪದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು
ಹುಬ್ಬಳ್ಳಿ ನಾಗಶೆಟ್ಟಿಕೊಪ್ಪದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು   

ಹುಬ್ಬಳ್ಳಿ: ‘ಮೂರುಸಾವಿರ ಮಠಕ್ಕೆ ರಕ್ಷಣೆ ಕೊಡಲೆಂದು ಬಂದಿದ್ದೇನೆಯೇ ಹೊರತು, ಮಠಾಧಿಪತಿಯಾಗಲು ಅಲ್ಲ’ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಾಗಶೆಟ್ಟಿಕೊಪ್ಪದ ಹನುಮಂತ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಮೂರುಸಾವಿರ ಮಠದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಗಂಗಾಧರೇಂದ್ರ ಸ್ವಾಮೀಜಿ ಪೀಠಾಧಿಪತಿಯಾಗಿದ್ದಾಗಲೇ ಉತ್ತರಾಧಿಕಾರಿ ವಿವಾದ ಎದ್ದಿತ್ತು. ಅದರ ನಡುವೆಯೇ ನನ್ನನ್ನು ಉತ್ತರಾಕಾರಿ ಮಾಡುವ ಪ್ರಯತ್ನ ನಡೆಯಿತು. ಆಗ ಇಂದಿನ ಜಗದ್ಗುರುಗಳೇ ನನ್ನನ್ನು ಶ್ರೀಮಠದ ರಕ್ಷಣೆಗೆ ಬರಮಾಡಿಕೊಂಡಿದ್ದರು. ಆದರೆ, ಈಗ ಎಲ್ಲವೂ ಅಯೋಮಯವಾಗಿದೆ’ ಎಂದರು.

ADVERTISEMENT

‘ಸನ್ಯಾಸಿಯಾಗಬೇಕೆಂದು ನಾನು ಬಾಲ್ಯದಲ್ಲಿಯೇ ಮನೆ ಬಿಟ್ಟು ಬಂದಿದ್ದೇನೆ. ಮಠಾಧಿಪತಿ ಆಗಬೇಕೆನ್ನುವ ಆಸೆ ನನಗೆ ಇಲ್ಲ. ಹುಟ್ಟಿದ ಜನ್ಮ ಸಾರ್ಥಕವಾಗಬೇಕು ಎನ್ನುವ ಆಸೆಯಿದೆ. ಅದಕ್ಕಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಶ್ರೀಮಠದ ರಕ್ಷಣೆಗೆ ನೀವು ನನ್ನ ಕೈ ಹಿಡಿದು ಮುನ್ನಡೆಸಬೇಕು’ ಎಂದರು.

‘ಬಾಲೇಹೊಸೂರಿನ ಮಠಾಧೀಶನಾದಾಗ ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದರು. ರಾಜಕಾರಣಿಗಳು, ಭಕ್ತರು ಹಾಗೂ ಕೆಲವು ಮಠಾಧೀಶರು ಸಹ ಹತ್ತಿಕ್ಕುವ ಪ್ರಯತ್ನ ಮಾಡಿದರು. ಆದರೆ, ಅದ್ಯಾವುದಕ್ಕೂ ನಾನು ತಲೆ ಕೆಡೆಸಿಕೊಂಡಿಲ್ಲ’ ಎಂದು ಹೇಳಿದರು.

‘ಜನಪ್ರತಿನಿಧಿಯೊಬ್ಬರು ನನ್ನನ್ನು ಗೂಂಡಾ ಎಂದಿದ್ದರು. ಆಗ ನನ್ನ ಮನಸ್ಸಿಗೆ ಘಾಷಿಯಾಗಿತ್ತು. ಕೆಲ ದಿನಗಳ ನಂತರ ಅವರೇ ನನ್ನನ್ನು ಮನೆಗೆ ಕರೆದು ಪಾದಪೂಜೆ ಮಾಡಿ, ₹1ಲಕ್ಷ ದೇಣಿಗೆ ನಿಡಿದ್ದಾರೆ. ಅಲ್ಲದೇ, ಕುಟುಂಬ ಸಮೇತ ಬಾಲೇಹೊಸೂರು ಮಠಕ್ಕೆ ಬಂದು ಅನ್ನದಾಸೋಹ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಒಂದು ತಿಂಗಳ ಪ್ರವಚನ ಕಾರ್ಯಕ್ರಮದಲ್ಲಿ ನನ್ನ ಜೊತೆಯಿದ್ದ ವ್ಯಕ್ತಿಯೊಬ್ಬರು, ಈಗ ನನಗೆ ಗೂಂಡಾ ಎನ್ನುತ್ತಿದ್ದಾರೆ. ಯಾಕೆ ಎನ್ನುವುದು ಅವರು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ಬಸವಣ್ಣೆಪ್ಪ ಮೆಣಸಿನಕಾಯಿ, ಶಿವಾನಂದ ಮುತ್ತಣ್ಣವರ, ಪ್ರಕಾಶ ಬೆಂಡಿಗೇರಿ, ರವಿ ಬದ್ನಿ, ಮಹಾದೇವ ಹುಡೇದ, ಮಲ್ಲೇಶಪ್ಪ ಅಂಗಡಿ, ಅಶೋಕ ಹುಲಿಕಟ್ಟಿ, ಮಂಜುನಾಥ ಹಳ್ಯಾಳ, ಈರಣ್ಣ ದಾಸರ, ಸುರೇಶ ಪಾಟೀಲ, ಪ್ರಕಾಶ ಹಳ್ಯಾಳ, ಪ್ರವೀಣ ಹುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.