ADVERTISEMENT

ಸಂತ್ರಸ್ತರಿಗೆ ಆಹಾರ ಸಾಮಗ್ರಿ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 16:54 IST
Last Updated 1 ಸೆಪ್ಟೆಂಬರ್ 2019, 16:54 IST
ಸಚಿವ ಜಗದೀಶ ಶೆಟ್ಟರ್‌ ಭಾನುವಾರ ಬನಶಂಕರಿ ದೇವಸ್ಥಾನದಲ್ಲಿ ಸಂತ್ರಸ್ತರಿಗೆ ಕಿಟ್‌ ವಿತರಿಸಿದರು
ಸಚಿವ ಜಗದೀಶ ಶೆಟ್ಟರ್‌ ಭಾನುವಾರ ಬನಶಂಕರಿ ದೇವಸ್ಥಾನದಲ್ಲಿ ಸಂತ್ರಸ್ತರಿಗೆ ಕಿಟ್‌ ವಿತರಿಸಿದರು   

ಹುಬ್ಬಳ್ಳಿ: ಸತತ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಂತ್ರಸ್ತರಾಗಿದ್ದ ಬನಶಂಕರಿ ಬಡಾವಣೆ, ದೇವಿನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಜನರಿಗೆ ಜಿಲ್ಲಾಡಳಿತದ ವತಿಯಿಂದ ಸಿದ್ಧಪಡಿಸಲಾಗಿದ್ದ ಆಹಾರ ಸಾಮಗ್ರಿಗಳ ಕಿಟ್‌ ಅನ್ನು ಸಚಿವ ಜಗದೀಶ ಶೆಟ್ಟರ್‌ ಭಾನುವಾರ ವಿತರಿಸಿದರು.

ಬನಶಂಕರಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಟ್‌ ವಿತರಿಸಿ ‘ನೆರೆಯಿಂದ ಸಂಕಷ್ಟಕ್ಕೆ ಒಳಗಾದಜನರಿಗೆ ನಮ್ಮ ಸರ್ಕಾರ ತಕ್ಷಣವೇ ಸ್ಪಂದಿಸಿದೆ. ಹಿಂದೆ ಯಾವ ಸರ್ಕಾರಗಳೂ ಕೊಡದಷ್ಟು ನೆರವನ್ನು ನಾವು ನೀಡುತ್ತಿದ್ದೇವೆ. ಮನೆ ಸಾಮಗ್ರಿಗಳನ್ನು ಕಳೆದುಕೊಂಡುಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ₹ 10 ಸಾವಿರ ನೀಡಲಾಗಿದೆ’ ಎಂದರು.

‘ಈ ಬಡಾವಣೆಯಲ್ಲಿ 235 ಕುಟುಂಬಗಳಿಗೆ ಕಿಟ್‌ ನೀಡಲಾಗಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಕೊಡಲಾಗುವುದು. ತುಂಡಾಗಿರುವ ದೇವಿನಗರ ಹಾಗೂ ಬನಶಂಕರಿ ಬಡಾವಣೆ ಬ್ರಿಡ್ಜ್‌ಗಳಿಗೆ ಸದ್ಯದಲ್ಲೇ ತಾತ್ಕಾಲಿಕ ದುರಸ್ತಿ ಮಾಡಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹೊಸ ಬ್ರಿಡ್ಜ್‌ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಕಿಟ್‌ ಪಡೆಯಲು ಬಂದಿದ್ದ ಕೆಲವರು ‘ನಮಗಿನ್ನೂ ₹ 10 ಸಾವಿರ ಹಣ ಬಂದಿಲ್ಲ’ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್‌ ‘ಬ್ಯಾಂಕ್‌ ಖಾತೆ ಸಂಖ್ಯೆ ಅಥವಾ ಇನ್ನಿತರ ಬೇರೆ ಸಮಸ್ಯೆ ಕಾರಣಕ್ಕೆ ಹಣ ಬಂದಿರದೇ ಇರಬಹುದು.ಸ್ಥಳೀಯರು, ತಹಶೀಲ್ದಾರ್‌ಗೆ ನಿಮ್ಮ ಸಮಸ್ಯೆ ಗಮನಕ್ಕೆ ತನ್ನಿ’ ಎಂದರು.

ಹುಬ್ಬಳ್ಳಿ ತಾಲ್ಲೂಕು ವ್ಯಾಪ್ತಿಯ ನಗರದಲ್ಲಿ ಒಟ್ಟು 7,148 ಕುಟುಂಬಗಳಿಗೆ ಕಿಟ್‌ ನೀಡಲು ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ. ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮನೆಮನೆಗೆ ತೆರಳಿ ಕಿಟ್‌ ನೀಡಲಿದ್ದಾರೆ.

ಈ ಕಿಟ್‌ನಲ್ಲಿ10 ಕೆ.ಜಿ. ಅಕ್ಕಿ, 1 ಕೆ.ಜಿ. ತೊಗರಿಬೇಳೆ, 1 ಕೆ.ಜಿ. ಸಕ್ಕರೆ, 1 ಕೆ.ಜಿ. ಐಯೋಡಿನ್‌ಯುಕ್ತ ಉಪ್ಪು, 1‌ ಲೀಟರ್ ತಾಳೆ ಎಣ್ಣೆ‌‌ ಹಾಗೂ ಪ್ರತ್ಯೇಕವಾಗಿ 5 ಲೀಟರ್ ಸೀಮೆ ಎಣ್ಣೆಯ ಕ್ಯಾನ್ ಇರುತ್ತದೆ.

ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಪಾಲಿಕೆ ಮಾಜಿ ಸದಸ್ಯರಾದ ಮಹೇಶ ಬುರ್ಲಿ, ಉಮೇಶ ಕೌಜಗೇರಿ,5ನೇ ವಲಯ ಸಹಾಯಕ ಆಯುಕ್ತ ಎಸ್‌.ಸಿ. ಬೇವೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.