ADVERTISEMENT

ಹುಬ್ಬಳ್ಳಿ: 2.81 ಲಕ್ಷ ಹೆಕ್ಟೇರ್‌ ಬಿತ್ತನೆಯ ಗುರಿ

ಮುಂಗಾರು: ಬಿತ್ತನೆ ಬೀಜ, ರಸಗೊಬ್ಬರ ಅಗತ್ಯ ದಾಸ್ತಾನು

ಎಲ್‌.ಮಂಜುನಾಥ
Published 18 ಮೇ 2025, 16:21 IST
Last Updated 18 ಮೇ 2025, 16:21 IST
ಧಾರವಾಡದ ಕಮಲಾಪುರದಲ್ಲಿನ ಸೊಸೈಟಿ ಕೇಂದ್ರದಲ್ಲಿರುವ ರಸಗೊಬ್ಬರದ ದಾಸ್ತಾನನ್ನು ಶುಕ್ರವಾರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹಾಗೂ ಅಧಿಕಾರಿಗಳ ತಂಡ ಪರಿಶೀಲಿಸಿತು
ಧಾರವಾಡದ ಕಮಲಾಪುರದಲ್ಲಿನ ಸೊಸೈಟಿ ಕೇಂದ್ರದಲ್ಲಿರುವ ರಸಗೊಬ್ಬರದ ದಾಸ್ತಾನನ್ನು ಶುಕ್ರವಾರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹಾಗೂ ಅಧಿಕಾರಿಗಳ ತಂಡ ಪರಿಶೀಲಿಸಿತು   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೆಲವೆಡೆ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದು, ರೈತರು ಈಗಾಗಲೇ ಮುಂಗಾರು ಹಂಗಾಮಿನ ಬಿತ್ತನೆಗಾಗಿ ಹೊಲವನ್ನು ಹಸನು ಮಾಡಲು ಸಜ್ಜಾಗುತ್ತಿದ್ದಾರೆ. 

ಸೋಯಾಬಿನ್‌, ಅವರೆ, ಮೆಕ್ಕೆಜೋಳ, ಶೇಂಗಾ, ಹೆಸರು, ಉದ್ದು, ಭತ್ತ, ತೊಗರಿ, ಅಲಸಂಧಿ, ಸೂರ್ಯಕಾಂತಿ, ಹತ್ತಿ, ಕಬ್ಬು ಸೇರಿದಂತೆ ತೋಟಗಾರಿಕೆ, ದ್ವಿದಳ ಧಾನ್ಯ ಹಾಗೂ ವಾಣಿಜ್ಯ ಬೆಳೆಗಳು ಜಿಲ್ಲೆಯ ಮುಂಗಾರಿನ ಪ್ರಮುಖ ಬೆಳೆಗಳಾಗಿದ್ದು, ರೈತರಿಗೆ ಬೇಡಿಕೆಗೆ ಅನುಗುಣವಾಗಿ ಮುಂಗಾರಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲು ಈಗಾಗಲೇ ಕೃಷಿ ಇಲಾಖೆಯೂ ಸಹ ಅಗತ್ಯ ದಾಸ್ತಾನು ಮಾಡಿಕೊಂಡಿದೆ. 

‘ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಒಟ್ಟು 2.81 ಲಕ್ಷ (2,81,595) ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ಇದರಲ್ಲಿ ಪ್ರಮುಖವಾಗಿ 11 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, 60 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 210 ಹೆಕ್ಟೇರ್‌ನಲ್ಲಿ ಜೋಳ, 200 ಹೆಕ್ಟೇರ್‌ನಲ್ಲಿ ತೊಗರಿ, 8,755 ಹೆಕ್ಟೇರ್‌ನಲ್ಲಿ ಉದ್ದು, 84,665 ಹೆಕ್ಟೇರ್‌ನಲ್ಲಿ ಹೆಸರು, 20,740 ಹೆಕ್ಟೇರ್‌ನಲ್ಲಿ ಶೇಂಗಾ, 100 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 34,600 ಹೆಕ್ಟೇರ್‌ನಲ್ಲಿ ಸೋಯಾ ಅವರೆ, 52 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, 9,050 ಹೆಕ್ಟೇರ್‌ನಲ್ಲಿ ಕಬ್ಬು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2.81 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಈ ಬಾರಿಯ ಬಿತ್ತನೆಯ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ.

ADVERTISEMENT

‘ನೈರುತ್ಯ ಮುಂಗಾರು ಮೇ 27ಕ್ಕೆ ಕೇರಳಕ್ಕೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಇದೆ. ಇದಕ್ಕೆ ಪೂರಕವಾಗಿ ಈಗಾಗಲೇ ಜಿಲ್ಲೆಯ ಕೆಲವಡೆ ಮುಂಗಾರು ಪೂರ್ವ ಮಳೆಯೂ ಆಗಿದೆ. ಆದರೆ, ಇದೇ ಮಳೆಗೆ ರೈತರು ಬಿತ್ತನೆಗೆ ಮುಂದಾಗದೇ ಜೂನ್‌ ಆರಂಭದಲ್ಲಿ ಮುಂಗಾರಿನ ಉತ್ತಮ ಮಳೆ ಸುರಿದು ಜಮೀನು ಪೂರ್ಣವಾಗಿ ಹದವಾದ ನಂತರ ಬಿತ್ತನೆ ಮಾಡಬೇಕು’ ಎಂದು ಸಲಹೆ ನೀಡುತ್ತಾರೆ. 

16 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು:

‘ಮುಂಗಾರು ಬಿತ್ತನೆಗೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿ ತೊಂದರೆ ಆಗಬಾರದು ಎಂದು ಬೇಡಿಕೆಗೆ ತಕ್ಕಂತೆ ಸೋಯಾಬಿನ್‌, ಅವರೆ, ಮೆಕ್ಕೆಜೋಳ, ಶೇಂಗಾ, ಹೆಸರು, ಉದ್ದು, ತೊಗರಿ ಸೇರಿದಂತೆ ಮುಂಗಾರಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಳ್ಳಲಾಗಿದೆ. ಧಾರವಾಡ, ಕಲಘಟಗಿ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ತಾಲ್ಲೂಕು ಸೇರಿದಂತೆ ಜಿಲ್ಲೆಯ ರೈತರಿಗೆ ವಿತರಿಸಲು ಪ್ರಸ್ತುತ 16,479 ಕ್ವಿಂಟಲ್‌ ಬಿತ್ತನೆ ಬೀಜಗಳ ದಾಸ್ತಾನು ಇದೆ. ಮಳೆಯಾಗುತ್ತಿದ್ದಂತೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಲಾಗುತ್ತದೆ‘ ಎನ್ನುತ್ತಾರೆ ಅವರು. 

‘ಜಿಲ್ಲೆಯಲ್ಲಿ ಪ್ರಸ್ತುತ 14 ರೈತ ಸಂಪರ್ಕ ಕೇಂದ್ರ ಹಾಗೂ 17 ಹೆಚ್ಚುವರಿ ಉಪ ಕೇಂದ್ರಗಳು ಸೇರಿ ಒಟ್ಟು 31 ಬಿತ್ತನೆ ಬೀಜ ವಿತರಣಾ ಕೇಂದ್ರಗಳಿವೆ. ರೈತರಿಗೆ ಅಗತ್ಯವಿರುವ ಭತ್ತ, ಸೋಯಾಬೀನ್‌, ಹೆಸರು, ಉದ್ದು, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಏಕಧಾನ್ಯ, ದ್ವಿದಳ ಧಾನ್ಯಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು’ ಎನ್ನುತ್ತಾರೆ. 

 49 ಸಾವಿರ ಮೆಟ್ರಿಕ್‌ ಟನ್‌ ರಸ ಗೊಬ್ಬರದ ಬೇಡಿಕೆ:

‘ಜಿಲ್ಲೆಯಲ್ಲಿ ಪ್ರಸ್ತುತ 49 ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರದ ಅಗತ್ಯವಿದ್ದು, ಪ್ರಸ್ತುತ ಡಿಎಪಿ, ಎಂಒಪಿ ಕಾಂಪ್ಲೆಕ್ಸ್‌, ಯೂರಿಯಾ, ಎಸ್‌ಎಸ್‌ಪಿ ರಸಗೊಬ್ಬರ ಸೇರಿದಂತೆ ಒಟ್ಟು 25,715 ಮೆಟ್ಟಿಕ್‌ ಟನ್‌ ಗೊಬ್ಬರದ ದಾಸ್ತಾನು ಇದೆ. ಇದರಲ್ಲಿ ಮೇ ಅಂತ್ಯದವರೆಗೆ ಬಿತ್ತನೆಗಾಗಿ 8,864 ಮೆಟ್ರಿಕ್‌ ಟನ್‌ ರಸಗೊಬ್ಬರ ಮಾರಾಟ ಮಾಡಲಾಗಿದೆ. ಇನ್ನೂ 16,851 ರಸಗೊಬ್ಬರದ ಸಂಗ್ರಹವಿದೆ. ರೈತರ ಬೇಡಿಕೆಗೆ ತಕ್ಕಂತೆ ಇನ್ನೂ ಹೆಚ್ಚಿನ ರಸಗೊಬ್ಬರ ಪೂರೈಕೆ ಮಾಡಲಾಗುವುದು ಎನ್ನುತ್ತಾರೆ ಅವರು. 

ಸರ್ಕಾರ ನಿಗದಿಪಡಿಸಿರುವ ದರಕ್ಕೆ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕು. ಕಡ್ಡಾಯವಾಗಿ ರಸೀದಿ ನೀಡಬೇಕು. ನಿಯಮ ಉಲ್ಲಂಘಿಸಿದರೆ ಕ್ರಮಗೊಳ್ಳಲಾಗುವುದು. ರೈತರು ಖರೀದಿ ಬಿಲ್‌ನ್ನು ಇಟ್ಟುಕೊಂಡಿರಬೇಕು.
ಮಂಜುನಾಥ ಅಂತರವಳ್ಳಿ ಜಂಟಿ ನಿರ್ದೇಶಕ  ಕೃಷಿ ಇಲಾಖೆ ಧಾರವಾಡ
ವಾಡಿಕೆಯಂತೆ ಮುಂಗಾರು ಮಳೆಯಾಗಲಿದ್ದು ರೈತರು ಹೊಲ ಹದಮಾಡಿಕೊಂಡು ಬಿತ್ತನೆ ಬೀಜ ರಸಗೊಬ್ಬರ ಸಂಗ್ರಹ ಇಟ್ಟುಕೊಳ್ಳಬೇಕು. ಮಿಶ್ರ ಬೆಳೆ ಬೆಳೆಯುವುದರಿಂದ ಬೆಳೆಹಾನಿ ಪ್ರಮಾಣದ ನಷ್ಟವನ್ನು ಸರಿದೂಗಿಸಬಹುದು.
ರವಿ ಪಾಟೀಲ ಕೃಷಿ ಹವಾಮಾನ ತಜ್ಞ ಧಾರವಾಡ ಕೃಷಿ ವಿಶ್ವವಿದ್ಯಾಲಯ 

ತೋಟಗಾರಿಕೆ ಬೆಳೆ: ಮಳೆಯ ಅವಲಂಬನೆ

‘ಜಿಲ್ಲೆಯಲ್ಲಿ ಅಂದಾಜು 50 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆ ಪ್ರದೇಶವಿದೆ. ಇದರಲ್ಲಿ ಸುಮಾರು 20 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ 16 ಸಾವಿರ ಹೆಕ್ಟೇರ್‌ನಲ್ಲಿ ಉಳ್ಳಾಗಡ್ಡಿ ಬಿತ್ತನೆ ಸಾಧ್ಯತೆ ಇದೆ. ಇದರೊಂದಿಗೆ ಆಲೂಗಡ್ಡೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಜೂನ್‌ ಆರಂಭದಲ್ಲಿ ಉತ್ತಮ ಮಳೆಯಾದರೆ ಬಹುತೇಕ ರೈತರು ಹೆಸರು ಉದ್ದು ಸೇರಿದಂತೆ ಕೃಷಿ ಬೆಳೆಗೆ ಆದ್ಯತೆ ನೀಡುತ್ತಾರೆ. ತೋಟಗಾರಿಕೆ ಬೆಳೆಯು ಬಹುತೇಕ ಮಳೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕಾಶೀನಾಥ ಭದ್ರಣ್ಣನವರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.