ADVERTISEMENT

ದೋಣಿಯೇ ಸೂರಾಯಿತು, ಸಂತೆಯೇ ಹಸಿವು ನೀಗಿಸಿತು

ಇ.ಎಸ್.ಸುಧೀಂದ್ರ ಪ್ರಸಾದ್
Published 8 ಆಗಸ್ಟ್ 2019, 9:14 IST
Last Updated 8 ಆಗಸ್ಟ್ 2019, 9:14 IST
ಧಾರವಾಡದ ನವಲಗುಂದ ತಾಲ್ಲೂಕಿನ ಶಿರಕೋಳ ಬಳಿ ತುಪ್ಪರಿ ಹಳ್ಳದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿ ಬಂದ ಮಹಮ್ಮದ್ ಝುಬೇರ್ ತಂಡವನ್ನು ಗ್ರಾಮಸ್ಥರು ಅಭಿನಂದಿಸಿದರು
ಧಾರವಾಡದ ನವಲಗುಂದ ತಾಲ್ಲೂಕಿನ ಶಿರಕೋಳ ಬಳಿ ತುಪ್ಪರಿ ಹಳ್ಳದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿ ಬಂದ ಮಹಮ್ಮದ್ ಝುಬೇರ್ ತಂಡವನ್ನು ಗ್ರಾಮಸ್ಥರು ಅಭಿನಂದಿಸಿದರು   

ಧಾರವಾಡ:ತುಪ್ಪರಿಹಳ್ಳದ ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಯನ್ನು ರಕ್ಷಿಸಲು ಹೋಗಿ ತಾವೇ ಸಿಲುಕಿದ ಅಧಿಕಾರಿಗಳು, ಇಡೀ ರಾತ್ರಿ ನಡುಗಡ್ಡೆಯಲ್ಲೇ ಕಳೆದು ಮರಳಿದ ರೋಚಕ ಘಟನೆ ನಲಗುಂದ ತಾಲ್ಲೂಕಿನ ಶಿರಕೋಳದಲ್ಲಿ ನಡೆದಿದೆ.

ತುಪ್ಪರಿಹಳ್ಳದಲ್ಲಿ ನೀರಿನ ಮಟ್ಟ ಕ್ಷಣ, ಕ್ಷಣಕ್ಕೂ ಏರುತ್ತಿದ್ದ ಹೊತ್ತಿನಲ್ಲಿ ರಕ್ಷಣೆಗೆ ತೆಗೆದುಕೊಂಡು ಹೋಗಿದ್ದ ದೋಣಿಯನ್ನೇ ಸೂರನ್ನಾಗಿಸಿಕೊಂಡು, ನಡುಗಡ್ಡೆಯಲ್ಲಿ ಸಿಲುಕಿದ್ದ ವ್ಯಕ್ತಿ ಮಾಡಿದ್ದ ಸಂತೆಯಲ್ಲೇ ಹಸಿವು ನೀಗಿಸಿಕೊಂಡು ರಾತ್ರಿ ಕಳೆದ ಸಂಗತಿಯನ್ನು ಉಪವಿಭಾಗಾಧಿಕಾರಿ ಮೊಹಮ್ಮದ್ ಝುಬೇರ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಬೆಣ್ಣಿಹಳ್ಳ ಉಕ್ಕಿ ಹರಿಯುತ್ತಿದ್ದುದರಿಂದ ಮಂಗಳವಾರ ಸಂಜೆ 6ಕ್ಕೆ ಅರೇಕುರಹಟ್ಟಿಯಲ್ಲಿ ಪರಿಹಾರ ಕೇಂದ್ರ ತೆರೆಯಲು ಸಿದ್ಧತೆ ಮಾಡುತ್ತಿದ್ದೆವು. ಅಷ್ಟೊತ್ತಿಗೆ ಶಿರಕೋಳದಲ್ಲಿ ವ್ಯಕ್ತಿಯೊಬ್ಬ ನೀರಿನಲ್ಲಿ ಸಿಲುಕಿರುವ ಕುರಿತು ಮಾಹಿತಿ ಲಭ್ಯವಾಯಿತು. ಸ್ಥಳಕ್ಕೆ ತಲುಪುವ ಹೊತ್ತಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಯಾಂತ್ರಿಕ ದೋಣಿ ಸಹಿತ ಬಂದಿದ್ದರು. ಈಜು ಗೊತ್ತಿದ್ದ ನಾನು, ನವಲಗುಂದ ಪಿಎಸ್‌ಐ ಜಯಪಾಲ್ ಪಾಟೀಲ, ಗ್ರಾಮದ ಮಂಜು ಹಾಗೂ ಅಗ್ನಿಶಾಮಕ ದಳದ ಇಬ್ಬರು ದೋಣಿಯಲ್ಲಿ ಹೊರಟೆವು’ ಎಂದು ಹೇಳಿದರು.

ADVERTISEMENT

‘ಸಂತೆ ಮುಗಿಸಿಕೊಂಡು ಸಂಶಿ ಮೂಲಕ ಶಿರಕೋಳಕ್ಕೆ ಹೊರಟಿದ್ದ ಗ್ರಾಮದ ರೈತ ಬಸಪ್ಪ ಹೆಬಸೂರು ತುಪ್ಪರಿಹಳ್ಳದ ನಡುಗಡ್ಡೆಯಲ್ಲಿ ಸಿಲುಕಿದ್ದರು. ಅವರ ಬಳಿ ಟಾರ್ಚ್ ಇತ್ತು. ಆ ಬೆಳಕಿನತ್ತಲೇ ಹೊರಟೆವು. ಸುಮಾರು 200 ಅಡಿ ದೂರದಲ್ಲಿದ್ದರು. ನಡುವೆ ದೋಣಿಯ ಮೋಟಾರಿಗೆ ಅಳವಡಿಸಿದ್ದ ಫ್ಯಾನ್‌ ರೆಕ್ಕೆ ಕಲ್ಲಿಗೆ ಬಡಿದು ಹಾಳಾಯಿತು. ಈಜು ಬರುತ್ತಿದ್ದ ನಾನು ಮತ್ತಿತರರು ನೀರಿಗಿಳಿದು ದೋಣಿಯನ್ನು ಅಲ್ಲೇ ಇದ್ದ ಕಲ್ಲಿಗೆ ಕಟ್ಟಿದೆವು. ಆಗಲೇ ಹಳ್ಳದ ಹರಿವಿನ ವೇಗ ತಿಳಿಯಿತು. ಆ ಹೊತ್ತಿಗೆ ವೇಳೆ ರಾತ್ರಿ 10 ಆಗಿತ್ತು’ ಎಂದು ವಿವರಿಸಿದರು.

‘ನಮ್ಮನ್ನು ನೋಡುತ್ತಿದ್ದಂತೆ ರೈತ ಬಸಪ್ಪ ಭಾವುಕರಾದರು. ಅವರನ್ನು ಸಮಧಾನಪಡಿಸಿದೆವು.ದೋಣಿ ಕೈಕೊಟ್ಟಿದ್ದರಿಂದ ಮತ್ತೊಂದು ದೋಣಿ ಬರಬಹುದು ಎಂಬ ನಿರೀಕ್ಷೆಯಲ್ಲೇ ನಾವೆಲ್ಲರೂ ಇದ್ದೆವು. ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಕ್ಷಣ ಕ್ಷಣಕ್ಕೂ ನಮ್ಮ ಸ್ಥಿತಿ ಕುರಿತು ಮಾಹಿತಿ ಪಡೆಯುತ್ತಲೇ ಇದ್ದರು. ಈ ನಡುವೆ ರಾತ್ರಿ ನಡುಗಡ್ಡೆಯಲ್ಲೇ ಕಳೆಯುವುದು ಎಂಬುದು ಖಾತ್ರಿಯಾಯಿತು.

ರೈತ ಬಸಪ್ಪ, ಸಂತೆ ಮಾಡಿ ಬಾಳೆಹಣ್ಣು ತಂದಿದ್ದರು. ಅದನ್ನೇ ಎಲ್ಲರೂ ಹಂಚಿಕೊಂಡು ತಿಂದೆವು. ಕಟ್ಟಿದ್ದ ದೋಣಿಯನ್ನೇ ಎಳೆದು ತಂದು, ಮಳೆಯಿಂದ ರಕ್ಷಣೆಗೆ ಸೂರು ಮಾಡಿಕೊಂಡೆವು. ಪರಸ್ಪರರು ಜೀವನಾನುಭವ ಹಂಚಿಕೊಂಡೆವು. ಬಸಪ್ಪನ ಬಳಿ ನಾಲ್ಕು ಕೂರಿಗೆ ಹೊಲ ಇದೆ. ಮೂವರು ಹೆಣ್ಣು ಮಕ್ಕಳು, ಅದರಲ್ಲಿ ಒಬ್ಬರ ಮದುವೆ ಮಾಡಿದ್ದಾರೆ ಎಂಬಿತ್ಯಾದಿ ಸಂಗತಿಯನ್ನು ಹಂಚಿಕೊಂಡರು. ಅಷ್ಟು ಹೊತ್ತಿಗೆ ನಸುಕಿನ 5 ಆಗಿತ್ತು. ಮತ್ತೊಂದು ಯಾಂತ್ರಿಕ ದೋಣಿಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡ ನಮ್ಮತ್ತ ಹೊರಟಿತ್ತು.

ಬೆಳಕಾಗುವಷ್ಟರಲ್ಲಿ ಹಳ್ಳದ ನೀರು 6 ಅಡಿ ಏರಿತ್ತು. ಎಂಥ ಅಪಾಯಕ್ಕೆ ನಮ್ಮನ್ನು ಒಡ್ಡಿಕೊಂಡಿದ್ದೆವು ಎಂದೆನಿಸಿತು. ಆದರೂ ಅಪಾಯಕ್ಕೆ ಸಿಲುಕಿದ ವ್ಯಕ್ತಿಯನ್ನು ರಕ್ಷಿಸಿದ ಸಂತೃಪ್ತಿ ನಮ್ಮೆಲ್ಲರಲ್ಲೂ ಇತ್ತು. ಇದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣವಾಗಿ ದಾಖಲಾಯಿತು’ ಎಂದು ಝುಬೇರ್ ಕಾರ್ಯಾಚರಣೆಯನ್ನು ವಿವರಿಸಿದರು.

ರಾತ್ರಿಯಿಂದ ಕಾದಿದ್ದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಡಿವೈಎಸ್‌ಪಿ ರಾಮನಗೌಡ ಹಟ್ಟಿ ಮತ್ತಿತರರು ತಂಡವನ್ನು ಅಭಿನಂದಿಸಿ, ರೋಚಕ ಕಥೆಯ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.