ADVERTISEMENT

ಪೋಷಕರನ್ನು ನಿರ್ಲಕ್ಷಿಸಬೇಡಿ: ಹೊರಟ್ಟಿ

ಬಂಟರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 17:01 IST
Last Updated 4 ಏಪ್ರಿಲ್ 2021, 17:01 IST
ಹುಬ್ಬಳ್ಳಿ–ಧಾರವಾಡ ಬಂಟರ ಸಂಘದ ವತಿಯಿಂದ ಭಾನುವಾರ ನಡೆದ ಪ್ರಸನ್ನ ಮಹಾಗಣಪತಿದೇವರ ಪ್ರತಿಷ್ಠಾಪನೆಯ 11ನೇ ವರ್ಧಂತ್ಯೋತ್ಸವ ಹಾಗೂ ಸಂಘದ ವಾರ್ಷಿಕ ಸಭಾ ಕಾರ್ಯಕ್ರಮವನ್ನು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು
ಹುಬ್ಬಳ್ಳಿ–ಧಾರವಾಡ ಬಂಟರ ಸಂಘದ ವತಿಯಿಂದ ಭಾನುವಾರ ನಡೆದ ಪ್ರಸನ್ನ ಮಹಾಗಣಪತಿದೇವರ ಪ್ರತಿಷ್ಠಾಪನೆಯ 11ನೇ ವರ್ಧಂತ್ಯೋತ್ಸವ ಹಾಗೂ ಸಂಘದ ವಾರ್ಷಿಕ ಸಭಾ ಕಾರ್ಯಕ್ರಮವನ್ನು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು   

ಹುಬ್ಬಳ್ಳಿ: ತಮ್ಮ ಮಕ್ಕಳು ಅತ್ಯುನ್ನತ ಸಾಧನೆ ಮಾಡಲಿ ಎನ್ನುವ ಕಾರಣಕ್ಕೆ ಪೋಷಕರು ತಮ್ಮ ಬದುಕನ್ನು ತ್ಯಾಗ ಮಾಡುತ್ತಾರೆ. ಸಾಕಷ್ಟು ನೋವುಗಳನ್ನು ಸಹಿಸಿಕೊಳ್ಳುತ್ತಾರೆ. ಆದ್ದರಿಂದ ಬೆಳೆದ ಮೇಲೆ ಮಕ್ಕಳು ಪೋಷಕರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಕ್ಕಳಿಗೆ ಕಿವಿಮಾತು ಹೇಳಿದರು.

ಹುಬ್ಬಳ್ಳಿ–ಧಾರವಾಡ ಬಂಟರ ಸಂಘ ನಗರದ ಆರ್‌.ಎನ್‌. ಶೆಟ್ಟಿ ಕಲ್ಯಾಣಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಸನ್ನ ಮಹಾಗಣಪತಿ ದೇವರ ಪ್ರತಿಷ್ಠಾಪನೆಯ 11ನೇ ವರ್ಧಂತ್ಯೋತ್ಸವ ಹಾಗೂ ಸಂಘದ ವಾರ್ಷಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪೋಷಕರ ಶ್ರಮದಿಂದ ಉನ್ನತ ಶಿಕ್ಷಣ ಪಡೆದು ವಿದೇಶಗಳಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸುವ ಮಕ್ಕಳು ತಮ್ಮ ತಂದೆ–ತಾಯಿಯ ಮುಪ್ಪಿನ ಕಾಲದಲ್ಲಿ ಅವರನ್ನು ಒಂಟಿಯಾಗಿ ಬಿಟ್ಟು ಹೋಗುತ್ತಿರುವುದು ಹೆಚ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘30ಕ್ಕೂ ಹೆಚ್ಚು ವರ್ಷಗಳಿಂದ ಬಂಟ ಸಮುದಾಯದ ಜನರ ಜೊತೆ ನನಗೆ ಒಡನಾಟವಿದೆ. ಅವರು ಎಲ್ಲಿಯೇ ಇದ್ದರೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ಮಾಡುತ್ತಾರೆ. ಸಂಸ್ಕಾರವಂತರಾಗಿ ತಮ್ಮ ಸುತ್ತಲಿನ ಸಮಾಜವನ್ನೂ ಸುಂದರವಾಗಿ ನಿರ್ಮಿಸುತ್ತಾರೆ’ ಎಂದರು.

ADVERTISEMENT

ವಿವಿಧ ತರಗತಿಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಟೂರ್ನಿಯ ಚಾಂಪಿಯನ್‌ ಒಡ್ಡೊಲಗ ತಂಡಕ್ಕೆ ₹20 ಸಾವಿರ ನಗದು, ಟ್ರೋಫಿ ಮತ್ತು ರನ್ನರ್ಸ್‌ ಅಪ್‌ ಬಯಲಾಟ ತಂಡಕ್ಕೆ ₹10 ಸಾವಿರ ಮತ್ತು ಟ್ರೋಫಿ ಕೊಡಲಾಯಿತು. ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಯಿತು.

ಸಂಘದ ಅಧ್ಯಕ್ಷ ಎಸ್‌. ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರಾದ ಕೆ. ಸುಧಾಕರ ಶೆಟ್ಟಿ ಸುಗ್ಗಿ, ಡಾ. ಡಿ.ಜಿ. ಶೆಟ್ಟಿ, ಖಜಾಂಚಿ ಹರ್ಷಕುಮಾರ ಶೆಟ್ಟಿ, ಪ್ರಮುಖರಾದ ಕೆ. ವೀರೇಂದ್ರ ಶೆಟ್ಟಿ, ಮಹೇಶ ಎಂ. ಶೆಟ್ಟಿ, ರಾಜೇಂದ್ರ ವಿ. ಶೆಟ್ಟಿ, ಸುಧೀರ ಜೆ. ಶೆಟ್ಟಿ, ರತ್ನಾಕರ ಎಂ. ಶೆಟ್ಟಿ, ಎಸ್‌.ಬಿ. ಶೆಟ್ಟಿ, ಸತೀಶ ಚಂದ್ರಶೆಟ್ಟಿ, ಪರಾಗ ಅಶೋಕಶೆಟ್ಟರ್‌, ಬಿ.ಸಿ. ಶೆಟ್ಟಿ, ಪ್ರಸನ್ನ ಶೆಟ್ಟಿ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.