ADVERTISEMENT

ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ: ಶಾಸಕ ಜಗದೀಶ ಶೆಟ್ಟರ್‌

ಕೋವಿಡ್‌ನಿಂತ ಮೃತಪಟ್ಟ ಕುಟುಂಬದವರಿಗೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 5:39 IST
Last Updated 18 ಡಿಸೆಂಬರ್ 2021, 5:39 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಶಾಸಕ ಜಗದೀಶ ಶೆಟ್ಟರ್‌ ಅವರು ಪರಿಹಾರ ಮೊತ್ತದ ಚೆಕ್‌ ವಿತರಿಸಿದರು
ಹುಬ್ಬಳ್ಳಿಯಲ್ಲಿ ಶುಕ್ರವಾರ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಶಾಸಕ ಜಗದೀಶ ಶೆಟ್ಟರ್‌ ಅವರು ಪರಿಹಾರ ಮೊತ್ತದ ಚೆಕ್‌ ವಿತರಿಸಿದರು   

ಹುಬ್ಬಳ್ಳಿ: ಕೋವಿಡ್‌ ಎರಡೂ ಅಲೆಯ ಸಮಯದಲ್ಲಿ ಅನೇಕರನ್ನು ಕಳೆದುಕೊಂಡಿದ್ದೇವೆ. ಮೂರನೇ ಅಲೆಯ ಆತಂಕ ಇರುವ ಕಾರಣ ನಿರ್ಲಕ್ಷ್ಯ ಮಾಡದೆ ನಿಯಮ ಪಾಲನೆ ಮಾಡಬೇಕು ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ವಿಭಾಗದಲ್ಲಿ (ಶಿರೂರು ವಲಯ ವ್ಯಾಪ್ತಿ) ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ಹಾಗೂ ಮಳೆಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ನೀಡಿದ ಪರಿಹಾರದ ಮೊತ್ತವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

‘ಹಲವು ದೇಶಗಳು ಕೋವಿಡ್‌ ಮೂರನೇ ಅಲೆಗೆ ಸಿಲುಕಿ ಪರದಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮುತುವರ್ಜಿ ವಹಿಸಿ ಎಲ್ಲರಿಗೂ ಉಚಿತ ಲಸಿಕೆ ಘೋಷಣೆ ನೀಡಿದ್ದರಿಂದ ಭಾರತದಲ್ಲಿ ಈಗ ಸೋಂಕಿನ ಹಾವಳಿ ಕಡಿಮೆಯಾಗಿದೆ. ಈಗಲೂ ಎಚ್ಚರಿಕೆಯಿಂದ ಇರಬೇಕು’ ಎಂದರು.

ADVERTISEMENT

ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ ‘ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ನೆರವು ನೀಡಿದೆ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳನ್ನು ತಂದುಕೊಡಲು ಯಾರಿಂದಲೂ ಆಗುವುದಿಲ್ಲ. ಸರ್ಕಾರದಿಂದ ನೀಡಿದ ಪರಿಹಾರ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಮಾತನಾಡಿ ‘ನಗರ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕಾರ್ಡ್‌ ಹೊಂದಿರುವ 568 ಜನ ಇದ್ದಾರೆ. ಗ್ರಾಮೀಣ ತಾಲ್ಲೂಕಿನಲ್ಲಿ ಸೋಂಕಿನಿಂದ ಮೃತಪಟ್ಟ 67 ಜನ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ. ಇವರಿಗೆ ಕೇಂದ್ರದಿಂದ ₹50 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ₹1 ಲಕ್ಷ ಪರಿಹಾರ ನೀಡಲಾಗಿದೆ’ ಎಂದರು.

ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ ಆಗಸ್ಟ್‌ ಹಾಗೂ ನವೆಂಬರ್‌ನಲ್ಲಿ ಸುರಿದ ಮಳೆಯಿಂದ ಹಾನಿಯಾದ 149 ಮನೆಗಳ ಮಾಲೀಕರಿಗೆ ತಲಾ ₹10 ಸಾವಿರ ನೀಡಲಾಯಿತು.

ಉಪವಿಭಾಗಾಧಿಕಾರಿ ಗೋಪಾಲಕೃಷ್ಣ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ, ಹುಡಾ ಅಧ್ಯಕ್ಷ ನಾಗೇಶ ಕಲಬರ್ಗಿ, ಪಾಲಿಕೆ ಸದಸ್ಯರಾದ ಬೀರಪ್ಪ ಖಂಡೇಕರ, ಸರಸ್ವತಿ ಧೋಂಗಡಿ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.