ADVERTISEMENT

ಆಸೆ, ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 16:14 IST
Last Updated 11 ಏಪ್ರಿಲ್ 2019, 16:14 IST
ಧಾರವಾಡದ ಕಮಲಾಪುರ ಸುತ್ತಮುತ್ತಲಿನ ಮತಗಟ್ಟೆಗಳ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿ, ಮತದಾನದ ಮಹತ್ವ ಕುರಿತು ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್‌ ವಿವರಿಸಿದರು 
ಧಾರವಾಡದ ಕಮಲಾಪುರ ಸುತ್ತಮುತ್ತಲಿನ ಮತಗಟ್ಟೆಗಳ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿ, ಮತದಾನದ ಮಹತ್ವ ಕುರಿತು ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್‌ ವಿವರಿಸಿದರು    

ಧಾರವಾಡ: ‘ಬರುವ ಏಪ್ರಿಲ್ 23 ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತಚಲಾಯಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿಕೊಟ್ಟಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

ಇಲ್ಲಿನ ಕಮಲಾಪುರ ಸುತ್ತಮುತ್ತಲಿನ ಮತಗಟ್ಟೆ ಸಂಖ್ಯೆ 140, 145, 158 ಹಾಗೂ 216 ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿ, ಮತದಾನದ ಮಹತ್ವ ಕುರಿತು ವಿವರಿಸಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೂ ಒಂದು ಮತದ ಪವಿತ್ರ ಹಕ್ಕನ್ನು ಕಲ್ಪಿಸಿದೆ. ಮತದಾನ ಮಾಡುವುದು ಎಲ್ಲರ ಕರ್ತವ್ಯವೂ ಆಗಿದೆ. ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು’ ಎಂದರು.

‘ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುತ್ತಿದೆ. ಕಳೆದ 70 ವರ್ಷಗಳಿಂದ ನಿಷ್ಪಕ್ಷಪಾತ ಚುನಾವಣೆ ನಡೆಸಿಕೊಂಡು ಬರುತ್ತಿರುವ ಹಿರಿಮೆ ನಮ್ಮ ಚುನಾವಣಾ ಆಯೋಗಕ್ಕೆ ಇದೆ. ಮತದಾರರು ಯಾವುದೇ ಪ್ರಭಾವ, ಆಮಿಷಗಳಿಗೆ ಬಲಿಯಾಗದೆ ಸ್ವವಿವೇಚನೆಯಿಂದ ತಮ್ಮ ಹಕ್ಕು ಚಲಾಯಿಸಬೇಕು. ಹಿರಿಯ ನಾಗರಿಕರು, ಅಂಗವೈಕಲ್ಯ ಹೊಂದಿದವರಿಗೆ ಮತಗಟ್ಟೆಗಳಿಗೆ ಬರಲು ಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ಚೋಳನ್‌ ಹೇಳಿದರು.

ADVERTISEMENT

ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್, ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್.ರುದ್ರಪ್ಪ, ತಹಸೀಲ್ದಾರ ಪ್ರಕಾಶ ಕುದರಿ, ಪೊಲೀಸ್ ಅಧಿಕಾರಿ ಮಾಲತೇಶ ಬಸಾಪುರ, ಲಕ್ಷೀಕಾಂತ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.