ADVERTISEMENT

ಮರಳಿದ ದೃಷ್ಟಿ; ಅಗರವಾಲ್‌ ಆಸ್ಪತ್ರೆ ಯಶೋಗಾಥೆ

ಆಪ್ಟಿಕಲ್‌ ಕೆರಟೋಪ್ಲಾಸ್ಟಿ ಮತ್ತು ಡಿಎಎಲ್‌ಕೆ ಶಸ್ತ್ರ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:00 IST
Last Updated 13 ಜೂನ್ 2019, 20:00 IST
ಹುಬ್ಬಳ್ಳಿಯ ಡಾ.ಅಗರವಾಲ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶ್ರೀಕೃಷ್ಣ ನಾಡಗೌಡ ಮಾತನಾಡಿದರು. ಡಾ.ರವಿ ನಾಡಿಗೀರ, ರೋಗಿ ಎಸ್‌.ವಿನಯಬಾಬು, ಡಾ.ರಘು ನಾಗರಾಜು ಇದ್ದಾರೆ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಡಾ.ಅಗರವಾಲ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶ್ರೀಕೃಷ್ಣ ನಾಡಗೌಡ ಮಾತನಾಡಿದರು. ಡಾ.ರವಿ ನಾಡಿಗೀರ, ರೋಗಿ ಎಸ್‌.ವಿನಯಬಾಬು, ಡಾ.ರಘು ನಾಗರಾಜು ಇದ್ದಾರೆ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಮಂದ ದೃಷ್ಟಿ ಮತ್ತು ಕಾರ್ನಿಯಲ್‌ ಪರ್ಫೊರೇಶನ್‌ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಇಲ್ಲಿನ ಡಾ.ಅಗರವಾಲ್‌ ಕಣ್ಣಿನ ಆಸ್ಪತ್ರೆ ವೈದ್ಯರು, ಆಪ್ಟಿಕಲ್‌ ಕೆರಟೋಪ್ಲಾಸ್ಟಿ ಮತ್ತು ಡಿಎಎಲ್‌ಕೆ ಎಂಬ ಅತ್ಯಂತ ಸಂಕೀರ್ಣವಾದ ಮತ್ತು ಅಪರೂಪದ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ದೃಷ್ಟಿ ಮರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯವರೇ ಆದ ಸಾಫ್ಟ್‌ವೇರ್‌ ಎಂಜಿನಿಯರ್‌ ಎಸ್‌.ವಿನಯಬಾಬು ನಾಯ್ಡು(34) ಅವರು ಮಂದ ದೃಷ್ಟಿ(ಕೆರಟೊಕೊನಸ್‌) ಹಾಗೂ ಬಲಗಣ್ಣಿನಲ್ಲಿ ಕಾರ್ನಿಯಲ್‌ ಪರ್ಫೊರೇಶನ್‌ ಎಂಬ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಬಲಗಣ್ಣಿನಲ್ಲಿ ಕೇವಲ ಬೆರಳು ಎಣಿಸುವಷ್ಟು ದೃಷ್ಟಿ ಹಾಗೂ ಎಡಗಣ್ಣಿನಲ್ಲಿ 1/60 ರಷ್ಟು ದೃಷ್ಟಿ ಮಾತ್ರ ಇತ್ತು ಎಂದು ಡಾ.ಅಗರವಾಲ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶ್ರೀಕೃಷ್ಣ ನಾಡಗೌಡ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೋಗವು ನಾಲ್ಕನೇ ಹಂತಕ್ಕೆ ತಲುಪಿದ್ದ ಕಾರಣ ಆಪ್ಟಿಕಲ್‌ ಕೆರಟೊಪ್ಲಾಸ್ಟಿ ಮತ್ತು ಡಿಎಎಲ್‌ಕೆ ಶಸ್ತ್ರಚಿಕಿತ್ಸೆ ನಡೆಸುವುದು ತಾಂತ್ರಿಕವಾಗಿ ಸವಾಲಿನಿಂದ ಕೂಡಿತ್ತು ಎಂದು ಹೇಳಿದರು.

ADVERTISEMENT

ಶಸ್ತ್ರಚಿಕಿತ್ಸೆ ನಂತರ ರೋಗಿಯು ಮೊದಲ ದಿನವೇ ಎರಡೂ ಕಣ್ಣುಗಳಲ್ಲಿ 6/18 ಆಧಾರದಲ್ಲಿ ದೃಷ್ಟಿಯನ್ನು ಪಡೆದುಕೊಂಡರು. ನಂತರದ ದಿನಗಳಲ್ಲಿ 6/12ರಷ್ಟು ದೃಷ್ಟಿ ಪಡೆದುಕೊಂಡರು ಎಂದು ತಿಳಿಸಿದರು.

ಭಾರತದಲ್ಲಿ 3 ಕೋಟಿ ಜನ ಅಂಧತ್ವದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜನರು ಸತ್ತ ಬಳಿಕ ನೇತ್ರದಾನ ಮಾಡಲು ಮುಂದೆ ಬಂದರೆ ಶೇ 80 ರಿಂದ ಶೇ 85ರಷ್ಟು ಅಂಧತ್ವ ನಿವಾರಣೆ ಮಾಡಬಹುದಾಗಿದೆ ಎಂದರು.

ವೈದ್ಯಕೀಯ ನಿರ್ದೇಶಕ ಡಾ.ರವಿ ನಾಡಿಗೀರ್‌ ಮಾತನಾಡಿ, ಸಾಮಾನ್ಯವಾಗಿ 20ರಿಂದ 40 ವರ್ಷ ವಯೋಮಾನದವರಲ್ಲಿ ಕೆರಟೊಕೊನಸ್‌ ನಾನ್‌ ಇನ್‌ಫೆಕ್ಷನ್‌ ಕಾರ್ನಿಯಲ್‌ ಕಂಡುಬರುತ್ತದೆ. ಇದು ದೃಷ್ಟಿ ಅಂಧತ್ವವನ್ನು ತರುತ್ತದೆ. ಕೆರಟಿಕೊನಸ್‌ ಕಾಯಿಲೆಯನ್ನು ಹೊಂದಿರುವ ರೋಗಿಗಳಲ್ಲಿ ಅತ್ಯುತ್ತಮವಾದ ಕನ್ನಡಕ ಧರಿಸಿದರೂ ಸಹ ದೃಷ್ಟಿ ಮುಸುಕಾಗಿ ಕಾಣುತ್ತದೆ. ಕಣ್ಣಿನಲ್ಲಿ ಒತ್ತುವಿಕೆ ಅಥವಾ ತುರಿಕೆ ಮತ್ತು ದೃಷ್ಟಿ ಮಂದವಾಗುತ್ತಾ ಹೋಗುತ್ತದೆ ಎಂದು ತಿಳಿಸಿದರು.

ಕೆರಟೊಕೊನಸ್‌ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದರೆ ಸೂಕ್ತ ಚಿಕಿತ್ಸೆಯಿಂದ ನಿಯಂತ್ರಣ ಮಾಡಬಹುದು ಹಾಗೂ ಕ್ರಾಸ್‌ ಲಿಂಕಿಂಗ್‌, ಇಂಟ್ಯಾಕ್ಸ್‌, ಇನ್‌ಸ್ಟ್ರೋಮಲ್‌ ರಿಂಗ್ಸ್‌ನಂತಹ ವಿಧಾನಗಳ ಮೂಲಕ ರೋಗ ಉಲ್ಬಣವಾಗುವುದನ್ನು ತಡೆಗಟ್ಟಬಹುದಾಗಿ ಎಂದರು.

ಡಾ.ರಘು ನಾಗಾರಾಜು ಮಾತನಾಡಿ, ಭಾರತೀಯ ಸಮಾಜದಲ್ಲಿ ನೇತ್ರದಾನ ಮಾಡುವ ವಿಚಾರದಲ್ಲಿ ಹೇಳಿಕೊಳ್ಳುವಂತಹ ಜಾಗೃತಿ ಮೂಡಿಲ್ಲ ಮತ್ತು ಭಾರತದಲ್ಲಿ ಕಸಿ ಮಾಡಿಸಿಕೊಳ್ಳಲು ಕಣ್ಣಿಗಾಗಿ ಕಾಯುತ್ತಿರುವ ಅಥವಾ ಕಣ್ಣಿಗೆ ಇರುವ ಬೇಡಿಕೆಗೆ ಪೂರಕವಾಗಿ ನೇತ್ರದಾನ ನಡೆಯುತ್ತಿಲ್ಲ ಎಂದು ಹೇಳಿದರು.

ಶ್ರೀಲಂಕಾದಂತ ದೇಶಗಳಿಂದ ತುರ್ತಾಗಿ ಕಾರ್ನಿಯಲ್‌ ಟಿಶ್ಯೂಗಳನ್ನು ತರಿಸಿಕೊಳ್ಳಲಾಗುತ್ತದೆ. ನಮ್ಮ ದೇಶದಲ್ಲಿ ನೇತ್ರದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಆಂದೋಲನಗಳು ನಡೆಯಬೇಕಾಗಿದೆ ಮತ್ತು ನೇತ್ರದಾನ ಕೇಂದ್ರಗಳನ್ನು ಆರಂಭಿಸುವ ಅಗತ್ಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.