ADVERTISEMENT

ಧಾರವಾಡ | ಅತಿವೃಷ್ಟಿ ಹಾನಿ ಅಧ್ಯಯನ: ಕೇಂದ್ರ ಅಂತರ್ ಸಚಿವಾಲಯ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 13:11 IST
Last Updated 8 ಸೆಪ್ಟೆಂಬರ್ 2020, 13:11 IST

ಧಾರವಾಡ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಮಂಗಳವಾರ ಭೇಡಿ ನೀಡಿ ಪರಿಶೀಲಿಸಿತು.

ಕೇಂದ್ರ ಕೃಷಿ ಹಾಗೂ ರೈತರ ಸಹಕಾರ ಮಾರುಕಟ್ಟೆ ಮಂತ್ರಾಲಯದ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಮನೋಹರನ್ ಹಾಗೂ ಕೇಂದ್ರ ಜಲಶಕ್ತಿ ಮಂತ್ರಾಲಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ಜಿ. ಗುರುಪ್ರಸಾದ್ ಅವರನ್ನೊಳಗೊಂಡ 2ನೇ ತಂಡ ಜಿಲ್ಲೆಗೆ ಭೇಟಿ ನೀಡಿತು. ಇವರನ್ನು ಹಾರೋಬೆಳವಡಿ ಗ್ರಾಮದ ಬಳಿ ಸವದತ್ತಿ- ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆ ಬಳಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬರಮಾಡಿಕೊಂಡರು. ಶಾಸಕರಾದ ಅಮೃತ ದೇಸಾಯಿ, ಆನಂದ ಮಾಮನಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತಿತರರು ಸೇತುವೆ ಹಾನಿಯಿಂದ ಸ್ಥಳೀಯರು ಎದುರಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದರು.

ಹಾರೋಬೆಳವಡಿ ತುಪ್ಪರಿಹಳ್ಳ ವ್ಯಾಪ್ತಿಯ ಈಶ್ವರ ಶಿವಳ್ಳಿ ಅವರ ಐದು ಎಕರೆ ಜಮೀನಿನಲ್ಲಿ ನಾಶವಾಗಿರುವ ಉಳ್ಳಾಗಡ್ಡಿ ಬೆಳೆ ವೀಕ್ಷಿಸಿದರು. ಅಮ್ಮಿನಭಾವಿ ಗ್ರಾಮ ವ್ಯಾಪ್ತಿಯ ಶಾಂತಾ ಮಸಾಲೆಭರಿತ ಅವರ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಅನ್ವರ್ ಅವರ ಸೋಯಾಬೀನ್, ಹೆಸರು, ಉಳ್ಳಾಗಡ್ಡಿ ಹಾಗೂ ಉದ್ದು ಬೆಳೆಗಳ ಹಾನಿ ಪರಿಶೀಲಿಸಿದರು.

ADVERTISEMENT

ಬಸಪ್ಪ ಪೂಜಾರ ಅವರ 4 ಎಕರೆ ಹೆಸರು ಹಾಗೂ 2 ಎಕರೆ ಹತ್ತಿ , ರಾಮಣ್ಣ ಸವದತ್ತಿ ಅವರ 01 ಎಕರೆ 35 ಗಂಟೆ ಜಮೀನಿನಲ್ಲಿ ಜಲಾವೃತವಾಗಿ ಸಂಪೂರ್ಣ ಹಾನಿಯಾಗಿರುವ ಹೆಸರು, ಮಹಾದೇವಿ ಪಟ್ಟಣಶೆಟ್ಟಿ ಅವರ 2 ಎಕರೆ ಉಳ್ಳಾಗಡ್ಡಿ , 3 ಎಕರೆ ಪ್ರದೇಶದ ಹೆಸರು ಬೆಳೆ ಅತಿವೃಷ್ಟಿಗೆ ಹಾನಿಯಾಗಿರುವ ಕುರಿತು ರೈತರು ಮತ್ತು ಅಧಿಕಾರಿಗಳು ಕೇಂದ್ರ ತಂಡಕ್ಕೆ ಖುದ್ದಾಗಿ ವಿವರಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಉಪವಿಭಾಗಾಧಿಕಾರಿ ಡಾ‌.ಗೋಪಾಲಕೃಷ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ, ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮನೋಹರ ಮಂಡೋಳಿ, ತಹಸೀಲ್ದಾರ ಸಂತೋಷಕುಮಾರ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.