ADVERTISEMENT

ಡ್ರಗ್ಸ್‌ ದಂಧೆ: ಕಠಿಣ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 15:03 IST
Last Updated 11 ಸೆಪ್ಟೆಂಬರ್ 2020, 15:03 IST

ಹುಬ್ಬಳ್ಳಿ: ಶಾಲಾ, ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆಯಾಗುತ್ತಿವೆ ಎನ್ನುವ ಆತಂಕದ ಸುದ್ದಿಗಳು ಹರಿದಾಡುತ್ತಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕಠಿಣಕ್ರಮ ಕೈಗೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ಜಿಲ್ಲಾ ವೇದಿಕೆ ಒತ್ತಾಯಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ‘ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಯುವಜನರಲ್ಲಿ ಜಾಗೃತಿ ಮೂಡಿಸಬೇಕು, ಸಾಂಸ್ಕೃತಿಕ ವಲಯದಲ್ಲಿ ಹಾವಳಿ ಹೆಚ್ಚಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಂತರ್ಜಾಲ ಬಳಸಿಕೊಂಡು ಡ್ರಗ್ಸ್‌ ವ್ಯವಹಾರ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಇವುಗಳ ಬಗ್ಗೆ ಸರ್ಕಾರ ಸಮಗ್ರ ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಡ್ರಗ್ಸ್‌ನಂತೆ ಮದ್ಯಸೇವನೆ ಕೂಡ ಅಪಾಯಕಾರಿ. ಆದ್ದರಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಒಟ್ಟು 25 ಮದ್ಯವರ್ಜನ ಶಿಬಿರ ನಡೆಸಿ 2,039 ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ 11,761 ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಜನಜಾಗೃತಿ ವೇದಿಕೆ ಮೂರು ದಶಕಗಳಿಂದ ಮಾದಕ ವಸ್ತುಗಳ ವಿರುದ್ಧ ಜನಾಂದೋಲನ ರೂಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ವೇದಿಕೆಯ ಮತ್ತು ಸಮಾನ ಮನಸ್ಕರ ಸಭೆ ನಡೆಸಿ ಮಾದಕ ವಸ್ತುಗಳ ಸೇವನೆ ಹತೋಟಿ ಮತ್ತು ನಿರ್ವಹಣೆಯ ಮಾರ್ಗಗಳ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಟಿ.ಎಸ್‌. ನಾಗಾಭರಣ ನಿರ್ದೇಶನದಲ್ಲಿ ‘ನಶೆಯಂಬ ನರಕ, ಮದ್ಯರಾಕ್ಷಸ ಮತ್ತು ಪ್ರಗತಿಗಾಗಿ ಜನಜಾಗೃತಿ’ ಎನ್ನುವ ಕಿರು ಚಿತ್ರಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಜನರಿಗೆ ತೋರಿಸಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ವೇದಿಕೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ವೇದಿಕೆ ಸಂಸ್ಥಾಪಕ ಅಧ್ಯಕ್ಷ ಫಿರೋಜಿ ಖಂಡೇಕರ್‌, ಪದಾಧಿಕಾರಿಗಳಾದ ದೇವೇಂದ್ರಪ್ಪ ಕಾಗೆನ್ನವರ, ರಘುನಾಥ ಕೆಸ್ತಲಿಂಗನಗೌಡ, ಶಿವಾನಂದ ಬೆಂತೂರ, ಹೂವಪ್ಪ ದಾಯಿಗೋಡೆ, ಮಹಾವೀರ ಉಪಾಧ್ಯೆ, ರಮೇಶ ಪಲ್ಲೇದ ಮತ್ತು ಪ್ರಭಾಕರ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.