ಧಾರವಾಡ: ಗ್ರಾಮ ಪಂಚಾಯಿತಿಗಳಲ್ಲಿ ‘ಇ-ಸ್ವತ್ತು’ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಇ–ಸ್ವತ್ತು ಅರ್ಜಿ ಸಲ್ಲಿಕೆಯಾಗಿ ತಿಂಗಳಾದರೂ ಸಲ್ಲಿಕೆಯಾಗಿರುವ ಹಲವು ಪಂಚಾಯಿತಿಗಳಲ್ಲಿ ವಿಲೇವಾರಿ ಮಾಡಿಲ್ಲ. ತಕ್ಷಣವೇ ವಿಲೇವಾರಿ ಮಾಡಬೇಕು. ಬಾಕಿ ಕರ ವಸೂಲಾತಿ ಮತ್ತು ಗ್ರಂಥಾಲಯ ಉಪಕರ ವಸೂಲಾತಿ ಪ್ರಗತಿ ಕುಂಠಿತವಾಗಿದೆ. ಪ್ರತಿ ತಿಂಗಳು ಶೇ 10 ರಷ್ಟು ಗುರಿ ನಿಗದಿಪಡಿಸಿಕೊಂಡು ಪ್ರಗತಿ ಸಾಧಿಸಬೇಕು’ ಎಂದರು.
‘ಸ್ವಚ್ಛ ಭಾರತ ಮಿಷನ್ (ಎಸ್‌ಬಿಎಂ) ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ಪಡೆದ ಫಲಾನುಭವಿಗಳು ಶೌಚಾಲಯ ನಿರ್ಮಿಸಿಕೊಳ್ಳಲು ಅಗತ್ಯ ಕ್ರಮ ವಹಿಸಬೇಕು. ಹೊಸ ಕೂಸಿನ ಮನೆ ಪ್ರಾರಂಭಿಸಬೇಕು’ ಎಂದು ಸೂಚನೆ ನೀಡಿದರು.
ಉದ್ಯೋಗ ಖಾತರಿ ಯೋಜನೆ 2025-26ನೇ ಸಾಲಿನ ಮೇ ವರೆಗಿನ ಗುರಿ ಸಾಧನೆಗೆ ಇನ್ನು ಬಾಕಿ ಇದೆ. ಕಾಮಗಾರಿಗಳ ಡಿಪಿಆರ್ ತಯಾರಿಸಿ ಸಲ್ಲಿಸಬೇಕು. ವಸತಿ ಯೋಜನೆ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಮಂಜೂರಾದ ಮನೆಗಳಿಗೆ ಎನ್‍ಎಂಆರ್ ಸೃಜನೆಗೆ ತುರ್ತಾಗಿ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರುಮಠ, ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಮುಖ್ಯ ಯೋಜನಾ ಅಧಿಕಾರಿ ದೀಪಕ ಮಡಿವಾಳ, ಪಿಆರ್‌ಇಡಿ ಇಇ ಆರ್.ಎಮ್.ಸೊಪ್ಪಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.