ಹುಬ್ಬಳ್ಳಿ: ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ‘ಪರಿಸರ ರಕ್ಷಣೆ, ವಿಘ್ನೇಶನಿಗೆ ಅರ್ಪಣೆ’ ಘೋಷವಾಕ್ಯದಡಿ ಹಮ್ಮಿಕೊಂಡಿರುವ ‘ಇಕೊ ಭಕ್ತಿ ಸಂಭ್ರಮ’ ಅಭಿಯಾನಕ್ಕೆ ಮೇಯರ್ ಜ್ಯೋತಿ ಪಾಟೀಲ ಬುಧವಾರ ಚಾಲನೆ ನೀಡಿದರು.
ಇಲ್ಲಿನ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಅಭಿಯಾನದ ಪೋಸ್ಟರ್ ಹಾಗೂ ವಿವಿಧ ಸ್ಪರ್ಧೆಗಳ ನೋಂದಣಿಗೆ ವೆಬ್‍ಸೈಟ್ ಅನ್ನು ಲೋಕಾರ್ಪಣೆ ಮಾಡಲಾಯಿತು.
ನಂತರ ಮಾತನಾಡಿದ ಮೇಯರ್, ‘ಹಬ್ಬಗಳ ಸಂದರ್ಭದಲ್ಲಿ ಅವಳಿ ನಗರದಲ್ಲಿ ತ್ಯಾಜ್ಯ ಉತ್ಪಾದನೆ ಪ್ರಮಾಣ ಹೆಚ್ಚುತ್ತದೆ. ಇದನ್ನು ತಡೆಯುವುದು, ಪ್ಲಾಸ್ಟಿಕ್ ಮುಕ್ತ ನಗರ ಹಾಗೂ ಪರಿಸರ ಸ್ನೇಹಿಯಾಗಿ ಗಣೇಶ ಹಬ್ಬ ಆಚರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶ’ ಎಂದರು.
‘ಪಿಒಪಿಯಿಂದ ತಯಾರಿಸಿದ ಗಣೇಶ ಮೂರ್ತಿಗಳು, ಪ್ಲಾಸ್ಟಿಕ್‍ನಿಂದ ತಯಾರಿಸಿದ ಅಲಂಕಾರಿ ವಸ್ತುಗಳನ್ನು ಜಲಮೂಗಳಲ್ಲಿ ಬಿಸಾಡುವುದರಿಂದ ಜಲ ಮಾಲಿನ್ಯ ಉಂಟಾಗುತ್ತದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಮನೆ ಆವರಣದಲ್ಲಿ ಅಥವಾ ಸಂಚಾರಿ ವಿಸರ್ಜನಾ ವಾಹನಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು. ಪಿಒಪಿ ಮೂರ್ತಿಗಳನ್ನು ಬಳಸಬಾರದು‘ ಎಂದು ಹೇಳಿದರು.
‘ಅವಳಿನಗರ ಪ್ರತಿಯೊಬ್ಬರೂ ಈ ಅಭಿಯಾನಕ್ಕೆ ಕೈಜೋಡಿಸಿ, ಪರಿಸರ, ಜಲ ಮೂಲಗಳ ರಕ್ಷಣೆಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಉಪ ಮೇಯರ್ ಸಂತೋಷ ಚವ್ಹಾಣ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಹೆಚ್ಚುವರಿ ಆಯುಕ್ತ ವಿಜಯಕುಮಾರ ಆರ್., ಪಾಲಿಕೆ ವಲಯ ಕಚೇರಿಗಳ ಅಧಿಕಾರಿಗಳು, ಪಾಲಿಕೆ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.