ADVERTISEMENT

ಶಿಕ್ಷಣ ಕ್ಷೇತ್ರವೂ ಹಾದಿ ತಪ್ಪಿದೆ: ಹೊರಟ್ಟಿ

ಪ್ರಾಚಾರ್ಯ ಲಿಂಗರಾಜ ಅಂಗಡಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:59 IST
Last Updated 30 ಸೆಪ್ಟೆಂಬರ್ 2022, 16:59 IST
ಹುಬ್ಬಳ್ಳಿ ಜೆಸಿ ನಗರದ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಲಿಂಗರಾಜ ಅಂಗಡಿ ಅವರ ‘ಬುತ್ತಿ ಬಿಚ್ಚಿದಾಗ’ ಕೃತಿಯನ್ನು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು
ಹುಬ್ಬಳ್ಳಿ ಜೆಸಿ ನಗರದ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಲಿಂಗರಾಜ ಅಂಗಡಿ ಅವರ ‘ಬುತ್ತಿ ಬಿಚ್ಚಿದಾಗ’ ಕೃತಿಯನ್ನು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ‘ಎಲ್ಲ ಕ್ಷೇತ್ರದಂತೆ ಶಿಕ್ಷಣ ಕ್ಷೇತ್ರವೂ ಹಾದಿತಪ್ಪಿದೆ. ಅಧಿಕಾರಿಗಳು, ಶಿಕ್ಷಕರು ಹಾಗೂ ಪಾಲಕರು ಎಚ್ಚೆತ್ತುಕೊಂಡು ತಮ್ಮ ಜವಾಬ್ದಾರಿ ನಿರ್ವಹಿಸುವ ಅಗತ್ಯವಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿನ ಜೆಸಿ ನಗರದ ಜಗದ್ಗುರ ಮೂರು ಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರಾಚಾರ್ಯ ಲಿಂಗರಾಜ ಅಂಗಡಿ ಅವರಿಗೆ ಬೀಳ್ಕೊಡುಗೆ ಹಾಗೂ ‘ಬುತ್ತಿ ಬಿಚ್ಚಿದಾಗ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅನೇಕ ಶಾಲೆಯಲ್ಲಿ ಶಿಕ್ಷಕರಿಗೆ ವೇತನ ಸರಿಯಾಗಿ ಪಾವತಿಯಾಗುತ್ತಿಲ್ಲ. ಉದ್ಯೋಗ ಭದ್ರತೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ತಿಂಗಳಿಗೊಮ್ಮೆ ಶಾಲೆಗೆ ಬಂದು ವೇತನ ಪಡೆಯುವ ಶಿಕ್ಷಕರೂ ಇದ್ದಾರೆ. ಈ ಹಿಂದೆ ಶಾಲೆ ಆರಂಭವಾಗುವ ಪೂರ್ವ ಶಿಕ್ಷಕರು ಶಾಲೆಯಲ್ಲಿ ಇರುತ್ತಿದ್ದರು. ಈಗ, ಶಾಲೆ ಆರಂಭವಾದರೂ ಕೆಲವು ಶಿಕ್ಷಕರು ಬರುತ್ತಿಲ್ಲ. ಎಲ್ಲರೂ ತಮ್ಮ ಬದುಕಿನ ಬುತ್ತಿ ಬಿಚ್ಚಿದರೆ, ತಾವು ನಡೆಯುತ್ತಿರುವ ದಾರಿ ಹೇಗಿದೆ ಎನ್ನುವುದು ತಿಳಿದು ಬರುತ್ತದೆ’ ಎಂದರು.

ADVERTISEMENT

ಪ್ರಾದೇಶಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಬಿಳಿಗಿರಿ ಕೃಷ್ಣಮೂರ್ತಿ, ‘ಮೇಲಗಡೆಯಿಂದ ಶಿಕ್ಷಣಕ್ಕೆ ಬುನಾದಿ ಹಾಕಲಾಗುತ್ತಿದೆ. ಅದು ಪ್ರಾಥಮಿಕ ಶಿಕ್ಷಣದಲ್ಲಿ ಆಗಬೇಕಿದೆ. ಶಾಲೆಗಳಿಗೆ ಭೇಟಿ ನೀಡಿದಾಗ ಕೆಲವು ಮಕ್ಕಳಿಗೆ ಕನ್ನಡ ಸಹ ಸರಿಯಾಗಿ ಬರದಿರುವುದು ಕಂಡು ಬರುತ್ತದೆ. ಶಿಕ್ಷಣ ಪದ್ಧತಿಯಲ್ಲಿ ವಿಷಯ ವಿಶ್ಲೇಷಣೆ ಇಲ್ಲ, ಮಕ್ಕಳಿಗೆ ವಿಶ್ಲೇಷಣಾತ್ಮಕ ಜ್ಞಾನ ಬಿತ್ತುವುದಿಲ್ಲ. ಶಿಕ್ಷಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅವರೆಲ್ಲ ತಮಗೆ ದೊರೆತ ಅದ್ಭುತ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಾಚಾರ್ಯ ಲಿಂಗರಾಜ ಅಂಗಡಿ ಅವರ ‘ಬುತ್ತಿ ಬಿಚ್ಚಿದಾಗ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಸಾಹಿತಿ ಜೆ.ಎಂ. ನಾಗಯ್ಯ, ಎ.ಸಿ. ವಾಲಿ, ಸುಮಂಗಲಾ ಅಂಗಡಿ, ಶಶಿ ಸಾಲಿ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.