ADVERTISEMENT

ಹುಬ್ಬಳ್ಳಿ | ಈದ್‌ ಮಿಲಾದ್‌ ಸಂಭ್ರಮ: ಮೆರವಣಿಗೆ ಇಂದು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:48 IST
Last Updated 5 ಸೆಪ್ಟೆಂಬರ್ 2025, 5:48 IST
ಈದ್‌ ಮಿಲ್ಲಾದ್‌ ಪ್ರಯುಕ್ತ ಹಳೇ ಹುಬ್ಬಳ್ಳಿಯ ನಾರಾಯಣ ಸೋಪದಲ್ಲಿನ ಕರಿಮುಲ್ಲಾ ಶಾ ದರ್ಗಾವನ್ನು ವಿದ್ಯುತ್‌ ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು
ಈದ್‌ ಮಿಲ್ಲಾದ್‌ ಪ್ರಯುಕ್ತ ಹಳೇ ಹುಬ್ಬಳ್ಳಿಯ ನಾರಾಯಣ ಸೋಪದಲ್ಲಿನ ಕರಿಮುಲ್ಲಾ ಶಾ ದರ್ಗಾವನ್ನು ವಿದ್ಯುತ್‌ ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು   

ಹುಬ್ಬಳ್ಳಿ: ಇಸ್ಲಾಂ ಧರ್ಮದ ಪ್ರವರ್ತಕ ಹಜರತ್‌ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮದಿನದ ಅಂಗವಾಗಿ ಎಲ್ಲೆಡೆ ಶುಕ್ರವಾರ ಈದ್‌ ಮಿಲ್ಲಾದ್‌ ಹಬ್ಬವನ್ನು ಸಮುದಾಯದ ಜನರು ಸಡಗರ ಸಂಭ್ರಮದಿಂದ ಆಚರಿಸುವರು.  

ಹಬ್ಬದ ಪ್ರಯುಕ್ತ ನಗರದ ಎಲ್ಲಾ ಮಸೀದಿ, ದರ್ಗಾಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪ್ರಾರ್ಥನೆ ನಡೆಯಲಿದೆ. ನಂತರ ಮಧ್ಯಾಹ್ನ 2.30ಕ್ಕೆ ಇಲ್ಲಿನ ಇಸ್ಲಾಂಪುರ ರಸ್ತೆಯ ದಾರುಲ್ಲಾ ಉಲುಮ್‌ ಅಹಲೆ ಸುನ್ನತ್‌ ಗೌಸಿಯಾ ವತಿಯಿಂದ ಸಾಮೂಹಿಕ ಮೆರವಣಿಗೆ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಸಮುದಾಯ ಜನರು ಭಾಗವಹಿಸುವರು. ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರು ಮೆರವಣಿಗೆಗೆ ಚಾಲನೆ ನೀಡುವರು. 

‘ಮೆರವಣಿಗೆಯು ಬಂಕಾಪುರ ಚೌಕ್‌, ಯಲ್ಲಾಪುರ ಓಣಿ, ದುರ್ಗದ ಬೈಲ್‌, ವೀರಾಪುರ ಓಣಿ, ಬಮ್ಮಾಪುರ ಚೌಕ, ಪೆಂಡಾರ ಗಲ್ಲಿ ಮೂಲಕ ಸಾಗಿ ಹಳೇ ಹುಬ್ಬಳ್ಳಿಯ ಅಸಾರ ಹೊಂಡದಲ್ಲಿನ ಮೊಹಲ್ಲಾ ತಲುಪಿ, ಸಮಾರೋಪಗೊಳ್ಳಲಿದೆ. ನಗರದ ವಿವಿಧ ಓಣಿಗಳಿಂದ ಪ್ರತ್ಯೇಕ ತಂಡಗಳಲ್ಲಿ ಸಮುದಾಯ ಜನರು ಮೆರವಣಿಗೆ ಮೂಲಕ ಅಸಾರ ಹೊಂಡಕ್ಕೆ ಬರುವರು‘ ಎಂದು ಮೆರವಣಿಗೆಯ ನೇತೃತ್ವ ವಹಿಸುವ ಅಂಜುಮನ್‌– ಎ– ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಮಾಹಿತಿ ನೀಡಿದರು. 

ADVERTISEMENT

‘ಮೆರವಣಿಗೆಯ ಉದ್ದಕ್ಕೂ ಸಮುದಾಯದ ಜನರು ಮಹಮ್ಮದ್‌ ಪೈಗಂಬರ್ ಜೀವನ ಸಂದೇಶಗಳನ್ನು ಹೇಳುವರು. ಕೆಲವರು ಕುರಾನ್‌ ಪಠಣ ಮಾಡುತ್ತಾ ಸಾಗುತ್ತಾರೆ. ಕೆಲ ಸಂಘ ಸಂಸ್ಥೆಯವರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಶರಬತ್‌, ಮಜ್ಜಿಗೆ ವಿತರಿಸುತ್ತಾರೆ’ ಎಂದು ಹೇಳಿದರು. 

‘ದೇಶದ ಪ್ರಗತಿ ಹಾಗೂ ಎಲ್ಲಾ ಧರ್ಮದ ಜನರ ಶ್ರೇಯಸ್ಸಿಗಾಗಿ ಮಸೀದಿ, ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗುತ್ತದೆ. ಇದೇ ವೇಳೆ ಸಮುದಾಯದ ಸ್ಥಿತಿವಂತರು ಬಡವರಿಗೆ ಆಹಾರ ಧಾನ್ಯ ಸೇರಿದಂತೆ ಅವಶ್ಯ ವಸ್ತುಗಳನ್ನು ದಾನ ಮಾಡುವರು’ ಎಂದು ಧರ್ಮಗುರು ಶಾರಿಕ್‌ ಅಹಮ್ಮದ್‌ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.