ಹಳೇ ಹುಬ್ಬಳ್ಳಿಯ ಶಾ ಬಜಾರ್‌ನಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಟೋಪಿ ಖರೀದಿಸಿದರು
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ: ‘ರಂಜಾನ್’ ಮಾಸವಿಡೀ ಶ್ರದ್ಧೆಯಿಂದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ ಮುಸ್ಲಿಮರು ಹುಬ್ಬಳ್ಳಿಯಲ್ಲಿ ಈದ್–ಉಲ್ ಫಿತ್ರ್ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಎಲ್ಲಾ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ನಡೆದಿದೆ.
ನಗರದ ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಹಾಗೂ ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಮುಸ್ಲಿಮರು ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವರು. ನಂತರ ತಮ್ಮ ಬಂಧು–ಮಿತ್ರರನ್ನು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವರು.
ನಗರದ ಎಂ.ಜಿ.ಮಾರ್ಕೆಟ್, ದುರ್ಗದಬೈಲ್ ಮತ್ತು ಶಾ ಬಜಾರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿ ತನಕವೂ ಹಬ್ಬಕ್ಕೆ ಸಂಬಂಧಿಸಿದ ಹೊಸ ಬಟ್ಟೆ, ಮಸಾಲೆ ಪದಾರ್ಥ, ಸಿಹಿ ತಿನಿಸು ತಯಾರಿಗೆ ಬೇಕಾದ ಅಗತ್ಯ ವಸ್ತು ಹಾಗೂ ಒಣಹಣ್ಣುಗಳ ಖರೀದಿ ಜೋರಾಗಿಯೇ ನಡೆಯಿತು. ಇಲ್ಲಿನ ಹೋಟೆಲ್‌ಗಳಲ್ಲಿ ವಿವಿಧ ಬಗೆಯ ಮಾಂಸಾಹಾರಿ ಖಾದ್ಯಗಳು ಹಾಗೂ ಸಸ್ಯಹಾರಿ ತಿನಿಸುಗಳ ಮಾರಾಟವೂ ನಡೆಯಿತು.
ಶಿರ್‌ಕುರ್ಮಾ ತಯಾರಿಸಲು ಬೇಕಾಗುವ ಗೋಡಂಬಿ, ಬಾದಾಮ್, ಪಿಸ್ತಾ ಸೇರಿದಂತೆ ಒಣಹಣ್ಣುಗಳಿಗೆ ಇಲ್ಲಿನ ಶಾ ಬಜಾರ್‌ನಲ್ಲಿ ಬೇಡಿಕೆಯೂ ಹೆಚ್ಚಿತ್ತು. ದುಬಾರಿಯಿದ್ದರೂ ಸಮುದಾಯದ ಜನರು ಅವುಗಳನ್ನು ಮುಗಿಬಿದ್ದು ಖರೀದಿಸಿದರು.
‘ದೇಶದಲ್ಲಿನ ಎಲ್ಲಾ ಧರ್ಮ, ಜಾತಿ, ಸಮುದಾಯದವರೂ ಒಗ್ಗಟ್ಟಿನಿಂದ ಖುಷಿಯಿಂದ ಇರಬೇಕು. ದೇಶವೂ ಅಭಿವೃದ್ಧಿ ಹೊಂದಬೇಕು ಎಂದು ನಾವು ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಪ್ರಾರ್ಥಿಸುತ್ತೇವೆ. ಹಬ್ಬದ ವೇಳೆ ಎಲ್ಲಾ ಸಮುದಾಯದ ಬಡವರಿಗೆ ಉಚಿತವಾಗಿ ದಿನಸಿ ಸೇರಿ ಅಗತ್ಯ ವಸ್ತುಗಳನ್ನು ದಾನ ಮಾಡುತ್ತೇವೆ’ ಎಂದು ಮುಸ್ಲಿಂ ಧರ್ಮಗುರು ಮೌಲನಾ ನಯಾಜ್ ಆಲಂ ಶೇಖ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.