ಹುಬ್ಬಳ್ಳಿ: ‘ಮಸೀದಿಗಳು ಮುಸ್ಲಿಮರನ್ನು ಒಗ್ಗೂಡಿಸುವ ಕೇಂದ್ರಗಳಾಗಿವೆ. ಅದೇ ರೀತಿ ಹಿಂದೂಗಳನ್ನು ಒಗ್ಗೂಡಿಸಲು ಹನುಮಾನ್ ಚಾಲೀಸಾ ಕೇಂದ್ರಗಳನ್ನು ತೆರೆಯಬೇಕು’ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ತೊಗಾಡಿಯಾ ಹೇಳಿದರು.
ನಗರದ ಗೋಕುಲ ರಸ್ತೆಯ ನಾನಕಿ ಕನ್ವೆನ್ಷನ್ ಸಭಾ ಭವನದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗ ದಳ ಸೋಮವಾರ ಹಮ್ಮಿಕೊಂಡಿದ್ದ ‘ಹಿಂದೂ ಚಿಂತನಾ ಸಭೆ’ಯಲ್ಲಿ ಅವರು ಮಾತನಾಡಿದರು.
‘ಹಿಂದೂಗಳ ರಕ್ಷಣೆ, ಸಮೃದ್ಧಿಗಾಗಿ ದೇಶದ ಪ್ರತಿ ಹಳ್ಳಿ, ನಗರದಲ್ಲಿ ಹನುಮಾನ್ ಚಾಲೀಸಾ ಕೇಂದ್ರ ಸ್ಥಾಪಿಸಿ, ಪ್ರತಿ ಶನಿವಾರ ಆ ಕೇಂದ್ರಗಳಲ್ಲಿ ಪಠಣ ಮಾಡಬೇಕು. ಆ ಮೂಲಕ ದೇಶದ ಹಿಂದೂಗಳನ್ನು ಒಗ್ಗೂಡಿಸುವ ಅಭಿಯಾನ ಹಮ್ಮಿಕೊಳ್ಳಬೇಕು. ಈ ಕೇಂದ್ರಗಳಿಂದ ಬಡ ಹಿಂದೂಗಳಿಗೆ ಆಹಾರ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ದೊರೆಯುವಂತಾಗಬೇಕು’ ಎಂದು ಹೇಳಿದರು.
‘ದೇಶದಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಶೇ 86ರಷ್ಟು ಹಿಂದೂಗಳಿದ್ದರು. ಈಗ ಅದು ಶೇ 78ಕ್ಕೆ ಇಳಿಕೆಯಾಗಿದೆ. ಆದರೆ, ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ. ಹಿಂದೂಗಳ ಬಹುತ್ವಕ್ಕಾಗಿ ಜನಸಂಖ್ಯೆ ಹೆಚ್ಚಳದ ಕಾನೂನು ಜಾರಿಯಾಗಬೇಕು. ಬಾಂಗ್ಲಾದ ನುಸುಳುಕೋರರನ್ನು ಓಡಿಸಬೇಕು, ಹಿಂದೂಗಳಿಗೆ ಹೆಚ್ಚು ಉದ್ಯೋಗ ಸಿಗಬೇಕು. ಕಾನೂನು ಹಾಗೂ ವಿಸ್ತೃತ ಯೋಜನೆಯಿಂದ ಬಹುತ್ವ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಪರಮಾನಂದ ಸ್ವಾಮೀಜಿ, ‘ಹಿಂದೂಗಳನ್ನು ಒಗ್ಗೂಡಿಸುವ ಜಾಗೃತಿ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ನಮ್ಮನ್ನು ವಿರೋಧಿಸುವವರ ಶಕ್ತಿ ಕೇಂದ್ರಗಳು ಹೆಚ್ಚಾಗಿ, ಅಲ್ಲಿ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಸ್ವಾಮೀಜಿಗಳು ಸಹ ಎಡವಿದ್ದಾರೆ. ಹಿಂದೂ ಸಮಾಜ ಒಡೆದು ಹೋಗಿದ್ದು, ಒಗ್ಗೂಡಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.
ಉದ್ಯಮಿ ವಿಜಯ ಸಂಕೇಶ್ವರ, ಪ್ರದೀಪ ಗೌಡರ, ರಮೇಶ ಕುಲಕರ್ಣಿ, ನರೇಶ ಷಾ, ಸುರೇಶ ಜೈನ ಇದ್ದರು.
2025ರ ಡಿಸೆಂಬರ್ ಅಂತ್ಯದೊಳಗೆ ಕರ್ನಾಟಕದಲ್ಲಿ 1 ಲಕ್ಷ ಹುಬ್ಬಳ್ಳಿ ನಗರದಲ್ಲಿ 500 ಹನುಮಾನ್ ಚಾಲೀಸಾ ಕೇಂದ್ರಗಳನ್ನು ಸ್ಥಾಪಿಸಬೇಕುಪ್ರವೀಣ ತೊಗಾಡಿಯಾ ಸಂಸ್ಥಾಪಕ ಅಧ್ಯಕ್ಷ ಅಂತರರಾಷ್ಟ್ರೀಯ ಹಿಂದೂ ಪರಿಷತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.