ADVERTISEMENT

ಎಲ್ಲರಿಗೂ ಸಂವಿಧಾನದ ಅರಿವು ಅಗತ್ಯ: ಸಹಾಯಕ ಪ್ರಾಧ್ಯಾಪಕಿ ಪ್ರೊ.ದೀಪಾ ಪಾಟೀಲ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 14:05 IST
Last Updated 26 ನವೆಂಬರ್ 2021, 14:05 IST
ಕುಂದಗೋಳ ತಾಲ್ಲೂಕಿನ ಯಲಿವಾಳದ ಸರ್ಕಾರಿ ಪ್ರೌಡಶಾಲೆಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ಸಮಾಜ ವಿಜ್ಞಾನ ಶಿಕ್ಷಕ ನಾರಾಯಣ ಭಜಂತ್ರಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯ ಪ್ರಮಾಣ ವಚನ ಬೋಧಿಸಿದರು. ಮುಖ್ಯ ಶಿಕ್ಷಕ ಎಂ.ಕೆ. ಹಿರೆಗೌಡರ ಇದ್ದಾರೆ
ಕುಂದಗೋಳ ತಾಲ್ಲೂಕಿನ ಯಲಿವಾಳದ ಸರ್ಕಾರಿ ಪ್ರೌಡಶಾಲೆಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ಸಮಾಜ ವಿಜ್ಞಾನ ಶಿಕ್ಷಕ ನಾರಾಯಣ ಭಜಂತ್ರಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯ ಪ್ರಮಾಣ ವಚನ ಬೋಧಿಸಿದರು. ಮುಖ್ಯ ಶಿಕ್ಷಕ ಎಂ.ಕೆ. ಹಿರೆಗೌಡರ ಇದ್ದಾರೆ   

ಹುಬ್ಬಳ್ಳಿ: ‘ಸಂವಿಧಾನವನ್ನು ಪ್ರತಿಯೊಬ್ಬರೂ ಅರಿಯಬೇಕು. ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನ ಪಾಲಿಸಿ, ಸಂವಿಧಾನದ ಆಶಯಗಳನ್ನು ಈಡೇರಿಸಲು ಬದ್ಧರಾಗಬೇಕು’ ಎಂದುಸಹಾಯಕ ಪ್ರಾಧ್ಯಾಪಕಿ ಪ್ರೊ. ದೀಪಾ ಪಾಟೀಲ ಹೇಳಿದರು.

ಜೆ.ಸಿ ನಗರದ ಎಸ್.ಜೆ.ಎಂ.ವಿ.ಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್.ಎಸ್.ಎಸ್ ಘಟಕದಿಂದ ಆಯೋಜಿಸಿದ್ದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಿಧಾನದ ಪಾಲನೆ ಹಾಗೂ ರಕ್ಷಣೆ ಪ್ರತಿಯೊಬ್ಬರ ಹೊಣೆ. ಅನೇಕ ಜಾತಿ, ಧರ್ಮ, ಭಾಷೆ ಹಾಗೂ ಸಂಸ್ಕೃತಿಗಳ ಬಹುತ್ವದ ಭಾರತವನ್ನು ಬೆಸೆದಿರುವ ಶಕ್ತಿ ಸಂವಿಧಾನವಾಗಿದೆ. ಯಾರನ್ನೂ ಮೇಲು ಮತ್ತು ಕೀಳಾಗಿ ನೋಡದೆ, ಸಮಾನ ಅವಕಾಶಗಳನ್ನು ನೀಡಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಚಾರ್ಯೆ ಡಾ. ಸಿಸಿಲಿಯಾ ಡಿಕ್ರೂಜ್, ‘ನಾವೆಲ್ಲರೂ ಸ್ವತಂತ್ರವಾಗಿ ಬದುಕುತ್ತಿರುವುದಕ್ಕೆ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಬರೆದ ಸಂವಿಧಾನವೇ ಕಾರಣ. ಅದನ್ನು ಗೌರವಿಸಿ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಹೇಳಿದರು.

ಡಾ. ಶಿವಲೀಲಾ ವೈಜಿನಾಥ ಅವರು, ಸಂವಿಧಾನದ ಪ್ರಸ್ತಾವನೆಯ ವಿಷಯಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಮಹದೇವ ಹರಿಜನ, ಡಾ. ಗುರುರಾಜ ನವಲಗುಂದ, ಪ್ರೊ. ಶಿವಕುಮಾರ ಬನ್ನಿಹಟ್ಟಿ, ಡಾ. ತಾಯಣ್ಣ ಎಚ್, ಪ್ರೊ. ಅಣ್ಣಪ್ಪ ಕೊರವರ ಇದ್ದರು.

ಶ್ರೇಷ್ಠ ಸಂವಿಧಾನ:

‘ಡಾ.ಬಿ.ಆರ್ ಅಂಬೇಡ್ಕರ್ ಅವರ ರಚಿಸಿರುವ ದೇಶದ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದುದಾಗಿದೆ. ದೇಶದ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಸಂವಿಧಾನ ತನ್ನದೇ ಆದ ಕೊಡುಗೆ ನೀಡಿದೆ’ ಎಂದು ಪ್ರಾಂಶುಪಾಲ ರಾಮ್ ಮೋಹನ್ ಎಚ್.ಕೆ ಹೇಳಿದರು.

ಗೋಕುಲ ರಸ್ತೆಯ ಡಾ.ಆರ್.ಬಿ. ಪಾಟೀಲ ಮಹೇಶ ಪಿ.ಯು. ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಅವರು ಮಾನತಾಡಿದರು.ಕನ್ನಡ ಪ್ರಾಧ್ಯಾಪಕ ಪ್ರೋ.ಐ.ಎಸ್. ಹಿರೇಮಠ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು.ಉಪಪ್ರಾಚಾರ್ಯ ರಮೇಶ ಹೊಂಬಾಳೆ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾಪ್ರಭುತ್ವದ ತಳಹದಿ:

‘ಸಂವಿಧಾನವು ದೇಶದ ಪ್ರಜಾಪ್ರಭುತ್ವದ ತಳಹದಿಯಾಗಿದೆ. ದೇಶದ ಮಾರ್ಗದರ್ಶಕವಾಗಿರುವ ಸಂವಿಧಾನವು, ದೇಶದ ಏಕತೆ ಹಾಗೂ ಅಖಂಡೆಯನ್ನು ಎತ್ತಿ ಹಿಡಿದಿದೆ. ಪ್ರತಿಯೊಬ್ಬರಿಗೂ ಹಕ್ಕುಗಳ ಜೊತೆಗೆ, ಕರ್ತವ್ಯಗಳನ್ನು ನೀಡಿದೆ’ ಎಂದು ಶಿಕ್ಷಕಿ ನಿವೇದಿತಾ ಗಾಂವಕಾರ ಹೇಳಿದರು.

ತಾಲ್ಲೂಕಿನ ಕುಸುಗಲ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂವಿಧಾನವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನದ ರಕ್ಷಣೆ ಎಲ್ಲರ ಕರ್ತವ್ಯ’ ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕರಾದ ಪಿ.ಆರ್. ಮ್ಯಾಗೇರಿ, ‘ಸಂವಿಧಾನದ ಆಶಯಗಳು ಈಡೇರಬೇಕಾಗಿದೆ ಸರ್ವರಿಗೂ ಸಮಬಾಳು, ಸಮಪಾಲು ತತ್ವ ಜಾರಿಯಾಗಬೇಕು. ಸಾಮಾನ್ಯ ವ್ಯಕ್ತಿಯೂ ಉನ್ನತ ಹುದ್ದೆ ಅಲಂಕರಿಸುವ ಅವಕಾಶ ಕೊಟ್ಟಿರುವ ಸಂವಿಧಾನವನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಿಕ್ಷಕರಾದ ದಾಕ್ಷಾಯಣಿ ನಾಗಪ್ಪಗೋಳ, ಪದ್ಮಶ್ರೀ ಪಾಟೀಲ, ನರ‍್ಮಲಾ ಕಟಕದೊಂಡ, ಅಮೀರಾಬಾನು ದಲಾಲ್‌, ಪ್ರೀತಾ ಫರ್ನಾಂಡೀಸ್, ಸಂಜೀವಕುಮಾರ ಭೂಶೆಟ್ಟಿ, ನರಸಿಂಹಮೂರ್ತಿ ರಾಜೂರ ಹಾಗೂ ಪ್ರಭಾಕರ ಪತ್ತಾರ ಇದ್ದರು.

ಸಂವಿಧಾನ ಬದಲಾವಣೆಗೆ ಹುನ್ನಾರ: ಸಲೀಂ

‘ದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸಂವಿಧಾನ ಬದಲಿಸುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ದನಿ ಎತ್ತಲಿದ್ದು, ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡಲಿದೆ’ ಎಂದು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥೀ ಸಲೀಂ ಅಹ್ಮದ್ ಹೇಳಿದರು.

ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ದೇಶದ ಆತ್ಮವಾದ ಸಂವಿಧಾನಕ್ಕೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರ ಸಂವಿಧಾನವನ್ನು ಯಥಾವತ್ ಜಾರಿ ಮಾಡುವ ಮೂಲಕ, ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಅನೀಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಶಾಂತಮ್ಮ ಗುಜ್ಜಳ, ದೀಪಾ ಗೌರಿ, ಸ್ವಾತಿ ಮಾಳಗಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.