ADVERTISEMENT

ಹುಬ್ಬಳ್ಳಿ: ಏಪ್ರಿಲ್ 9ರಿಂದ ಕರಕುಶಲ ವಸ್ತುಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 14:29 IST
Last Updated 8 ಏಪ್ರಿಲ್ 2021, 14:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಲಘು ಉದ್ಯೋಗ ಭಾರತಿ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏ. 9ರಿಂದ ಮೂರು ದಿನ ಗೋಕುಲ ರಸ್ತೆಯ ಕೆಎಸ್‌ಆರ್‌ಟಿಸಿಯ ಸಾಮ್ರಾಟ್ ಹಾಲ್‌ನಲ್ಲಿ ಗ್ರಾಮೀಣ ಕರಕುಶಲ ವಸ್ತುಗಳ ಪ್ರದರ್ಶನ ಮೇಳ ಆಯೋಜಿಸಿದೆ. ಬೆಳಿಗ್ಗೆ 10ಕ್ಕೆ ಉದ್ಘಾಟನೆ ಜರುಗಲಿದೆ.

ಲಘು ಉದ್ಯೋಗ ಭಾರತಿ ಉಪಾಧ್ಯಕ್ಷ ಶಿವಾನಂದ ಅವಟಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಗ್ರಾಮೀಣ ಕರಕುಶಲ ಕರ್ಮಿಗಳ ಪ್ರತಿಭೆ ಅನಾವರಣ ಮತ್ತು ಆ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಈ ಕೆಲಸದಲ್ಲಿ ತೊಡಗಿರುವವರ ಕೌಶಲತೆ ಹೆಚ್ಚಿಸಬೇಕು, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಲಭಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಅನುಷ್ಠಾನಕ್ಕೆ ಉತ್ತೇಜನ ನೀಡುವುದು ಕೂಡ ನಮ್ಮ ಗುರಿಯಾಗಿದೆ’ ಎಂದರು.

‘ಬಡಗಿತನ, ಕಮ್ಮಾರಿಕೆ, ಕುಂಬಾರಿಕೆ, ಚಮ್ಮಾರಿಕೆ, ನೇಕಾರಿಕೆ, ಕೈಮಗ್ಗ, ಪಾರಂಪರಿಕ ವೈದ್ಯ ಪದ್ಧತಿ ಮತ್ತು ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಒಳಗೊಂಡ ಹತ್ತು ವಲಯಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ’ ಎಂದರು.

ADVERTISEMENT

ಲಘು ಉದ್ಯೋಗ ಭಾರತಿ ಸಂಯೋಜಕಿ ಸುನಂದಾ ಕಳಕಣ್ಣನವರ ಮಾತನಾಡಿ ‘ಪ್ರತಿ ವಲಯದಲ್ಲಿ ಒಂದು ಮಳಿಗೆಯಂತೆ ಒಟ್ಟು 140 ಮಳಿಗೆಗಳನ್ನು ಹಾಕಲಾಗಿದ್ದು, ಪ್ರದರ್ಶನಕ್ಕೆ ಬರುವ ಎಲ್ಲ ಕರಕುಶಲ ಕರ್ಮಿಗಳಿಗೆ ಉಚಿತವಾಗಿ ಊಟ ಹಾಗೂ ವಸತಿ ವ್ಯವಸ್ಥೆ ಇರಲಿದೆ. ಕೋವಿಡ್ 19 ನಿಯಮಾವಳಿ ಪಾಲನೆಗೆ ವಿಶೇಷ ಆದ್ಯತೆ ನೀಡಲಾಗುವುದು’‍ ಎಂದು ತಿಳಿಸಿದರು.

ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪಾಲ್ಗೊಳ್ಳಲಿದ್ದಾರೆ. ಕರಕುಶಲ ಮಾರಾಟ ಉತ್ತೇಜನದ ಕೌನ್ಸಿಲ್‌ನ ಮಹಾ ನಿರ್ದೇಶಕ ರಾಕೇಶ ಕುಮಾರ ಭಾಗವಹಿಸುವರು. ಲಘು ಉದ್ಯೋಗ ಭಾರತಿಯ ಸಲಹಾ ಸಮಿತಿ ಸದಸ್ಯ ರಾಜು ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.