ADVERTISEMENT

ಕಾಂಗ್ರೆಸ್‌ನಿಂದ ಸುಳ್ಳು ಆರೋಪ: ಟೆಂಗಿನಕಾಯಿ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:05 IST
Last Updated 6 ಮೇ 2022, 4:05 IST

ಹುಬ್ಬಳ್ಳಿ: ಕಾಂಗ್ರೆಸ್‌ ರಾಜ್ಯ ನಾಯಕರು ಸರ್ಕಾರದ ವಿರುದ್ಧಸುಳ್ಳು ಹೇಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಟೀಕಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಭೆಗಳ ಸೃಷ್ಟಿ, ಮುಸ್ಲಿಮರ ತುಷ್ಟೀಕರಣ ಮಾಡುವುದನ್ನೇ ಕಾಂಗ್ರೆಸ್‌ ಕೆಲಸವಾಗಿಸಿಕೊಂಡಿದೆ.ಸಿದ್ದರಾಮಯ್ಯ ಅವರು ಟೀಕೆ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಾಗಿದೆ. ಯಾವುದೇ ದಾಖಲೆಯಿಲ್ಲದೆ ಆರೋಪ ಮಾಡುವ ಮೂಲಕ ಹಿಟ್‌ ಆ್ಯಂಡ್‌ ರನ್ ನೀತಿ ಅನುಸರಿಸುತ್ತಿದ್ದಾರೆ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಸರ್ಕಾರವಿದ್ದಾಗಲೂ ನೇಮಕಾತಿಯಲ್ಲಿ ಹಗರಣಗಳು ನಡೆದಿದ್ದವು. ಅವುಗಳನ್ನು ಮುಚ್ಚಿ ಹಾಕುವ ಕೆಲಸ ಮಾಡಲಾಯಿತು. ಕಾನೂನು ಕ್ರಮ ಯಾಕೆ ತೆಗೆದುಕೊಳ್ಳಲಿಲ್ಲ. ಬಿಜೆಪಿ ಸರ್ಕಾರವು ಪಿಎಸ್‌ಐ ನೇಮಕಾತಿ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕ್ರಮಕೈಗೊಳ್ಳಲಾರಂಭಿಸಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

ADVERTISEMENT

ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಪ್ರಕರಣದ ಮಾಹಿತಿ ನೀಡುವಂತೆ ಮೂರು ಬಾರಿ ನೋಟಿಸ್‌ ನೀಡಲಾಗಿದೆ. ಆದರೆ, ದಾಖಲೆ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ದಾಖಲೆ ನೀಡಲು ಅವರಿಗೆ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್‌ ಷಾ ಅವರನ್ನು ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‌ನಿಂದ ನಿಯತ್ತಿನ ಪಾಠ ಕಲಿಯಬೇಕಿಲ್ಲ. ತಾನು ಕಳ್ಳ ಪರರ ನಂಬ ಎಂಬ ಸ್ಥಿತಿ ಸಿದ್ದರಾಮಯ್ಯ ಅವರದ್ದಾಗಿದೆ ಎಂದು ಟೀಕಿಸಿದರು.

ಲೋಕಾಯುಕ್ತವನ್ನು ಭ್ರಷ್ಟಾಚಾರ ನಿಗ್ರಹ ದಳ ಆಗಿಸುವ ಮೂಲಕ ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಸರ್ಕಾರ ಮಾಡಿತು. ಅದನ್ನು ಪುನಃ ಲೋಕಾಯುಕ್ತವಾಗಿಸುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್, ಲಿಂಗರಾಜ ಪಾಟೀಲ, ಸಂಜಯ ಕಪಟಕರ, ನಾಗೇಶ ಕಲಬುರ್ಗಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ರವಿ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.