ADVERTISEMENT

ಹುಬ್ಬಳ್ಳಿ: ಕೋವಿಡ್ ಪರಿಕರಗಳ ಪೂರೈಕೆ ಬಿಲ್‌ ಪಾವತಿಗೆ ವಿಳಂಬ, ದಯಾಮರಣಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 11:22 IST
Last Updated 30 ಅಕ್ಟೋಬರ್ 2022, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ‘ಕೋವಿಡ್ ಪರಿಕರಗಳನ್ನು ಪೂರೈಕೆ ಮಾಡಿದ ಹಣ ಪಾವತಿಸಲು ಎರಡು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳು ಕಮಿಷನ್‌ ಬೇಡಿಕೆ ಮುಂದಿಟ್ಟು ವಿಳಂಬ ಮಾಡುತ್ತಿದ್ದಾರೆ. ಸಾಲಗಾರರ ಕಾಟ ಸಂಕಷ್ಟ ತಂದೊಡ್ಡಿದ್ದು, ಹಣ ಪಾವತಿಗೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇಲ್ಲವೇ, ದಯಾಮರಣಕ್ಕೆ ಒಪ್ಪಿಗೆ ನೀಡಬೇಕು’ ಎಂದು ಇಲ್ಲಿನ ಶಾಂತಿನಗರದ ನಿವಾಸಿ, ಗುತ್ತಿಗೆದಾರ ಬಸವರಾಜ್‌ ಅಮರಗೋಳ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.

‘2020–21ನೇ ಸಾಲಿನಲ್ಲಿ ಸರ್ಕಾರದ ಆದೇಶದ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿಗೆ ₹85 ಲಕ್ಷದ ಹಾಗೂ ಮೂಡಗೆರೆ ತಾಲ್ಲೂಕಿಗೆ 27 ಲಕ್ಷದ ಮೌಲ್ಯದ ಕೋವಿಡ್‌ ಪರಿಕರಗಳನ್ನು ಪೂರೈಕೆ ಮಾಡಿದ್ದೆ. ಶೇ 20ರಷ್ಟು ಹಣ ಮಾತ್ರ ಪಾವತಿ ಮಾಡಿದ್ದಾರೆ. ಉಳಿದ ಹಣ ಪಾವತಿಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿನಂತಿಸಿದರೆ, ಕಮಿಷನ್‌ ಬೇಡಿಕೆ ಮುಂದಿಡುತ್ತಿದ್ದಾರೆ. ಬೇರೆ ಬೇರೆಯವರ ಹೆಸರಲ್ಲಿ ಹಾಗೂ ಶಾಸಕರ ಹೆಸರಲ್ಲಿ ಶೇ 30– ಶೇ 40ರಷ್ಟು ಕಮಿಷನ್‌ ಕೇಳುತ್ತಿದ್ದಾರೆ’ ಎಂದು ಬಸವರಾಜ್ ಭಾನುವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಹಣ ಪಾವತಿಸುವಂತೆ ಪ್ರಧಾನಮಂತ್ರಿ, ಮುಖ್ಯಮಂತ್ರಿ ಕಾರ್ಯಾಲಯ ಹಾಗೂ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅವರಿಂದಲೂ ಅಧಿಕಾರಿಗಳಿಗೆ ನಿರ್ದೇಶನ ಬಂದಿದೆ. ಆದರೂ, ಹಣ ಪಾವತಿಸದೆ ಕಿರುಕುಳ ನೀಡುತ್ತಿದ್ದಾರೆ. ಸಾಲಗಾರರ ಕಾಟದಿಂದ ಬೇಸತ್ತು ಹೋಗಿದ್ದು, ಮಾನಸಿಕವಾಗಿ ಜರ್ಜರಿತವಾಗಿದ್ದೇನೆ. ಹೀಗಾಗಿ ಬೇರೆ ಮಾರ್ಗವಿಲ್ಲದೆ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.