ADVERTISEMENT

ಸಾಲಬಾಧೆ, ವೈಯಕ್ತಿಕ ಕಾರಣ: ಬಾವಿಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:51 IST
Last Updated 22 ನವೆಂಬರ್ 2025, 4:51 IST
ಧಾರವಾಡದ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ನಾರಾಯಣ ಶಿಂಧೆ ಸಂಬಂಧಿಕರು ರೋದಿಸಿದರು.
ಧಾರವಾಡದ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ನಾರಾಯಣ ಶಿಂಧೆ ಸಂಬಂಧಿಕರು ರೋದಿಸಿದರು.   

ಧಾರವಾಡ: ತಾಲ್ಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಬಾವಿಗೆ ಬಿದ್ದು ಶುಕ್ರವಾರ ಮೃತಪಟ್ಟಿದ್ಧಾರೆ. 

ವಿಠ್ಠಲ ಶಿಂಧೆ (80), ಅವರ ಪುತ್ರ ನಾರಾಯಣ ಶಿಂಧೆ (40) ಮತ್ತು ನಾರಾಯಣ ಅವರ ಮಕ್ಕಳಾದ ಶಿವರಾಜ (12), ಶ್ರೀನಿಧಿ (11) ಮೃತಪಟ್ಟವರು. ನಾರಾಯಣ ಶಿಂಧೆ ಅವರು ಧಾರವಾಡದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶಿವರಾಜ ಆರು ಮತ್ತು ಶ್ರೀನಿಧಿ ಐದನೇ ತರಗತಿಯಲ್ಲಿ ಓದುತ್ತಿದ್ದರು.

ಸಾಲಬಾಧೆ, ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ADVERTISEMENT

‘ಮನೆಯಿಂದ ಬೆಳಿಗ್ಗೆ ನಾಲ್ವರೂ ಒಟ್ಟಿಗೆ ಹೋಗಿದ್ದರು. ಮಧ್ಯಾಹ್ನ ಗ್ರಾಮಸ್ಥರೊಬ್ಬರು ಊರ ಹೊರಗಿನ ಬಾವಿಯಲ್ಲಿ ಮೃತದೇಹಗಳನ್ನು ನೋಡಿ ಮಾಹಿತಿ ನೀಡಿದರು’ ಎಂದು ನಾರಾಯಣ ಅವರ ಸಹೋದರ ಕೃಷ್ಣ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆ ಕಟ್ಟಿಸಲು ಸಾಲ ಮಾಡಿದ್ದೆವು. ₹15 ಲಕ್ಷ ಸಾಲ ಇತ್ತು. ಮನೆಯ‌ನ್ನು ಭೋಗ್ಯಕ್ಕೆ ಕೊಟ್ಟಿದ್ದೆವು. ಒಡವೆ ಒತ್ತೆ ಇಟ್ಟು ಕೆಲವರಿಗೆ ಸಾಲದ ಹಣ ವಾಪಸ್‌ ಕೊಟ್ಟಿದ್ದೆವು’ ಎಂದು ನಾರಾಯಣ ಶಿಂಧೆ ಅವರ ಪತ್ನಿ ಶಿಲ್ಪಾ ಹೇಳಿದರು.

‘ಮಗಳು ಶಿಲ್ಪಾ ಈಚೆಗೆ ಧಾರವಾಡದಲ್ಲಿ ಹಿರಿಯರ ಆರೈಕೆ ಕೆಲಸಕ್ಕೆ ಸೇರಿಕೊಂಡಿದ್ಧಾರೆ.ಧಾರವಾಡದಿಂದ ಚಿಕ್ಕಮಲ್ಲಿಗವಾಡಕ್ಕೆ ಪ್ರತಿದಿನ ಓಡಾಡುತ್ತಾರೆ. ಗುರುವಾರ ರಾತ್ರಿ ಅಳಿಯ ನಾರಾಯಣ ಫೋನ್‌ ಮಾಡಿದ್ದರು. ಮನೆಗೆ ಬನ್ನಿ ಎಂದು ಹೇಳಿದ್ದರು’ ಎಂದರು. 

ಆಕ್ರಂದನ: ನಗರದ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶವಗಳನ್ನು ತರಲಾಗಿದೆ. ಶವಾಗಾರದ ಬಳಿ ಸಂಬಂಧಿಕರು ದುಃಖಿಸಿದರು. 

ಚಿಕ್ಕಮಲ್ಲಿಗವಾಡ ಗ್ರಾಮದ ಯಲ್ಲಮ್ಮ ಗುಡಿ ಬಳಿಯ ಬಾವಿಯಲ್ಲಿ ನಾಲ್ಕು ಮೃತದೇಹಗಳು ಸಿಕ್ಕಿವೆ. ಮೃತರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ನಡೆಯುತ್ತಿದೆ.
-ಗುಂಜನ್‌ ಆರ್ಯ, ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.