ADVERTISEMENT

ಹೆಣ್ಣು ಭ್ರೂಣ ಹತ್ಯೆ ದುರದೃಷ್ಟಕರ

ಮಹಿಳಾ ವೈದ್ಯರ ರಾಜ್ಯಮಟ್ಟದ ಸಮ್ಮೇಳನ: ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ವಿಷಾದ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 11:44 IST
Last Updated 6 ಜೂನ್ 2022, 11:44 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಮಹಿಳಾ ವೈದ್ಯರ ರಾಜ್ಯಮಟ್ಟದ ‘ಕನಕ-2022 ಸಮ್ಮೇಳನ’ವನ್ನು ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಉದ್ಘಾಟಿಸಿದರು / ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಮಹಿಳಾ ವೈದ್ಯರ ರಾಜ್ಯಮಟ್ಟದ ‘ಕನಕ-2022 ಸಮ್ಮೇಳನ’ವನ್ನು ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಉದ್ಘಾಟಿಸಿದರು / ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘21ನೇ ಶತಮಾನದಲ್ಲೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ದುರದೃಷ್ಟಕರ. ಇದನ್ನು ತಡೆಗಟ್ಟಲು ವಿದ್ಯಾವಂತ ಮಹಿಳೆಯರು ಹಾಗೂ ಪ್ರಜ್ಞಾವಂತ ಸಮಾಜ ಮುಂದಾಗಬೇಕು’ ಎಂದು ಬೆಂಗಳೂರಿನ ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಮಹಿಳಾ ವೈದ್ಯರ ಹುಬ್ಬಳ್ಳಿ ಘಟಕ ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ವೈದ್ಯರ ರಾಜ್ಯಮಟ್ಟದ ‘ಕನಕ-2022 ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಪ್ರತಿ ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಪುರುಷರಿಗೆ ಸಮಾನವಾಗಿ ನಿಂತು ತಾನು ಸಬಲೆ ಎಂದು ನಿರೂಪಿಸುತ್ತಿದ್ದಾಳೆ. ಆದರೂ, ಕೆಲವು ವೇಳೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಪುರುಷನನ್ನೇ ಅವಲಂಬಿಸುತ್ತಾಳೆ. ಇಲ್ಲವೇ ಹಿಂದೇಟು ಹಾಕುತ್ತಾಳೆ. ಇಂತಹ ಮನಃಸ್ಥಿತಿಯಿಂದ ಹೊರಬಂದು ಎಲ್ಲದರಲ್ಲೂ ತಾನು ಸಮರ್ಥಳು ಎಂದು ತೋರಿಸಬೇಕು’ ಎಂದರು.

ADVERTISEMENT

‘ಲಿಂಗ ತಾರತಮ್ಯವಿಲ್ಲದೆ ಮಕ್ಕಳಿಗೆ ಶಿಕ್ಷಣ ನೀಡಬೇಕು. ಬೆಳೆಯುವಾಗಲೇ ಸಮಾನತೆಯ ಪಾಠ ಹೇಳಿದರೆ, ಸಮಾಜದಲ್ಲಿ ಆ ಮಗು ಸಮಾನತೆಯನ್ನೇ ಪ್ರತಿಪಾದಿಸುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ದೌರ್ಜನ್ಯಗಳಾದರೆ ಅದನ್ನು ಪ್ರತಿರೋಧಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ದೂರದರ್ಶನ ಚಂದನದ ಸಹಾಯಕ ನಿರ್ದೇಶಕಿ ಡಾ. ನಿರ್ಮಲಾ ಯಲಿಗಾರ, ‘ಮಹಿಳೆ ಅಪ್ರತಿಮ ಪ್ರತಿಭಾವಂತೆ. ಎಲ್ಲಾ ಅಡೆತಡೆಗಳನ್ನು ಮೀರಿ ಸಾಧನೆಯತ್ತ ಮುನ್ನುಗ್ಗುತ್ತಿದ್ದಾಳೆ. ತಾಯಿಯಾಗಿ, ಅಕ್ಕ, ತಂಗಿ, ಪತ್ನಿ ಹೀಗೆ ಎಲ್ಲ ಸಂಬಂಧವನ್ನು ಮಹಿಳೆ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಅದರಲ್ಲೂ ವೈದ್ಯ ವೃತ್ತಿಯಲ್ಲಿರುವವರು ರೋಗಿಗೆ ತಾಯಿಯಾಗಿ ಚಿಕಿತ್ಸೆ ನೀಡಿ, ಕಾಳಜಿ ಮಾಡುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಸಂಘದಡಾ. ಸುರೇಶ ಕುಡ್ವಾ, ಡಾ. ಕವಿತಾ ರವಿ, ಡಾ. ಜಯಶ್ರೀ ಬಳಿಗಾರ, ಡಾ. ಶಶಿಕಲಾ ಹೊಸಮನಿ, ಡಾ. ಸಂಗೀತಾ ಅಂಟರತಾನಿ, ಡಾ‌. ಗೀತಾ ದೊಪ್ಪ, ಡಾ. ಎಸ್.ವೈ. ಮುಲ್ಕಿಪಾಟೀಲ, ಡಾ. ಭಾರತಿ ಭಾವಿಕಟ್ಟಿ, ಡಾ. ಮಂಜುನಾಥ ನೇಕಾರ, ಡಾ. ಕಾಂಚನಾ ಯು.ಟಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.