ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಇಲ್ಲಿನ ಗಣೇಶ ಪೇಟೆಯಲ್ಲಿ ₹6.40 ಕೋಟಿ ವೆಚ್ಚದಲ್ಲಿ ನೂತನ ಮೀನು ಮಾರುಕಟ್ಟೆ ನಿರ್ಮಾಣವಾಗಿ ಒಂದು ವರ್ಷ ಕಳೆದರೂ, ಫಲಾನುಭವಿಗಳಿಗೆ ಇನ್ನೂ ಹಂಚಿಕೆಯಾಗಿಲ್ಲ. ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಮೀನು ವ್ಯಾಪಾರ ನಡೆಸುತ್ತಿರುವುದರಿಂದ, ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶವೂ ವ್ಯಕ್ತವಾಗಿದೆ.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಸೋಮವಾರ ಮಾರುಕಟ್ಟೆ ಪ್ರದೇಶಕ್ಕೆ ತೆರಳಿ, ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಮಂಗಳವಾರ ಎಂದಿನಂತೆಯೇ, ವ್ಯಾಪಾರ ನಡೆಸುತ್ತಿದ್ದರಿಂದ, ಜೆಸಿಬಿಯಿಂದ ತೆರವುಗೊಳಿಸಲು ಮುಂದಾದರು. ಈ ವೇಳೆ ವ್ಯಾಪಾರಸ್ಥರು ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ವಾಗ್ವಾದ ನಡೆದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಮಧ್ಯಸ್ಥಿಕೆಯಲ್ಲಿ ತಿಳಿಯಾಯಿತು. ವ್ಯಾಪಾರಸ್ಥರು ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
‘ನೂತನ ಮೀನು ಮಾರುಕಟ್ಟೆ ನಿರ್ಮಾಣವಾಗಿ ಒಂದು ವರ್ಷವಾದರೂ ಇನ್ನೂ ಹಂಚಿಕೆ ಮಾಡಿಲ್ಲ. ಸರಿಯಾದ ನಿರ್ವಹಣೆಯಿಲ್ಲದೆ ಕಟ್ಟೆಗಳೆಲ್ಲ ಹಾಳಾಗುತ್ತಿದೆ. ರೋಸ್ಟರ್ ಪದ್ಧತಿ ಪ್ರಕಾರ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಸಾಕಷ್ಟು ಬಾರಿ ವಿನಂತಿಸಿದ್ದರೂ, ಪ್ರಯೋಜನವಾಗಿಲ್ಲ. ಹಂಚಿಕೆಯಾಗಿದ್ದರೆ, ನಾವ್ಯಾರೂ ಪಾದಾಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿರಲಿಲ್ಲ’ ಎಂದು ಮೀನು ವ್ಯಾಪಾರಸ್ಥರು ಹೇಳಿದರು.
‘30, 40 ವರ್ಷಗಳಿಂದ ಮೀನು ವ್ಯಾಪಾರ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ಬಡವರಾಗಿರುವ ನಮಗೆ ಹರಾಜಿನಲ್ಲಿ ಕಟ್ಟೆ ಖರೀದಿಸಲು ಸಾಧ್ಯವಿಲ್ಲ. ಕೆಲ ಉದ್ಯಮಿಗಳು ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದ್ದು, ಹೆಚ್ಚಿನ ಬೆಲೆಗೆ ಅವರು ಖರೀದಿಸುತ್ತಾರೆ. ಅದರಿಂದ ಮೂಲ ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತದೆ. ಈಗಿರುವ ವ್ಯಾಪಾರಸ್ಥರಿಗೆ ಚೀಟಿ ಎತ್ತುವ ಮೂಲಕ ಕಟ್ಟೆಗಳನ್ನು ಹಂಚಿಕೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಜನತಾ ಬಜಾರ್ ಮಾರುಕಟ್ಟೆಯಂತೆಯೇ, ಮೀನು ಮಾರುಕಟ್ಟೆಯನ್ನು ಸಹ ಚೀಟಿ ಎತ್ತುವ ಮೂಲಕ ಹಂಚಿಕೆ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಸರ್ಕಾರದ ನಿಯಮಾವಳಿ ಪ್ರಕಾರ ಹರಾಜಿನಲ್ಲಿ ಕಟ್ಟೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಅಲ್ಲಿರುವ ವ್ಯಾಪಾರಸ್ಥರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅನೇಕ ವರ್ಷಗಳಿಂದ ನಾವು ವ್ಯಾಪಾರ ಮಾಡುತ್ತ ಬಂದಿದ್ದೇವೆ. ತಮಗಷ್ಟೇ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆಯುಕ್ತರ ಜೊತೆ ಚರ್ಚಿಸಿ, ನೂತನ ಮಾರುಕಟ್ಟೆಯನ್ನು ವ್ಯಾಪಾರಕ್ಕೆ ಮುಕ್ತಗೊಳಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಮೇಯರ್ ರಾಮಪ್ಪ ಬಡಿಗೇರ ತಿಳಿಸಿದರು.
ಹರಾಜಿನಲ್ಲಿ ಮೀನು ಮಾರಾಟದ ಕಟ್ಟೆಗೆ ನಿಗದಿ ಪಡಿಸಿರುವ ದರ ಜಾಸ್ತಿಯಾಗುತ್ತದೆ ಎಂದು ವ್ಯಾಪಾರಸ್ಥರು ವಿರೋಧಿಸುತ್ತಿದ್ದಾರೆ. ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದುರಾಮಪ್ಪ ಬಡಿಗೇರ ಮೇಯರ್ ಹು–ಧಾ ಮಹಾನಗರ ಪಾಲಿಕೆ
36 ಸಗಟು ಮಾರಾಟ ಕಟ್ಟೆ
‘ಗಣೇಶ ಪೇಟೆಯಲ್ಲಿ ನಿರ್ಮಾಣವಾದ ನೂತನ ಮೀನು ಮಾರುಕಟ್ಟೆಯನ್ನು ಗೋವಾದ ಮೀನು ಮಾ
ರುಕಟ್ಟೆ ಮಾದರಿಯಲ್ಲಿ ನಿರ್ಮಿಸಲಾಗಿದೆ. 36 ಸಗಟು ಮಾರಾಟ ಕಟ್ಟೆಗಳು ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಶೌಚಾಲಯ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆ ನಿರಂತರ ನೀರು ಲಭ್ಯತೆ ಅಗ್ನಿ ಶಾಮಕ ವ್ಯವಸ್ಥೆ 10 ಸಾವಿರ ಲೀಟರ್ ನೀರು ಸಂಗ್ರಹಣಾ ತೊಟ್ಟಿ ಹೊಂದಿದೆ. 1161 ಚದರ್ ಮೀಟರ್ ಜಾಗದಲ್ಲಿ 798.142 ಚ.ಮೀ. ಜಾಗವನ್ನು ಕಟ್ಟಡಕ್ಕೆ ಬಳಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.