
ಹುಬ್ಬಳ್ಳಿ: ನಗರದ ವಿವಿಧೆಡೆ ಸೋಮವಾರ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಜೆ.ಕೆ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮುಖ್ಯ ಅತಿಥಿ ರೇಷ್ಮಾ ದೊಡ್ಡಮನಿ ಹಾಗೂ ಆಡಳಿತ ಮಂಡಳಿ ಸದಸ್ಯರು ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಭಾಷಣ ಹಾಗೂ ನಾಟಕ ಪ್ರದರ್ಶನ ನಡೆಯಿತು.
ನಗರದ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಒಕ್ಕೂಟದ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ನಿವೃತ್ತ ಶಿಕ್ಷಕ ಜೆ.ಎಲ್. ಚಂದ್ರಶೇಖರಯ್ಯ, ಹುಬ್ಬಳ್ಳಿ ಸಹಕಾರ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಗಂಗಾಧರ ಬಂಗಾರಗುಂಡ, ತಾಂತ್ರಿಕ ಸಿಬ್ಬಂದಿ ಧನಂಜಯ ಜಿ. ದೇಸಾಯಿ, ಟಿ.ಪ್ರಭಾಕರ, ಜೆ.ಸಿ. ತಿಲಕ ಭಾಗವಹಿಸಿದ್ದರು.
ಕೆಎಲ್‌ಇ ಸಂಸ್ಥೆಯ ಪ್ರೇರಣಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಪ್ರಾಚಾರ್ಯ ಕುಮಾರಸ್ವಾಮಿ ಮೇವುಂಡಿಮಠ ಧ್ವಜಾರೋಹಣ ನೆರವೇರಿಸಿದರು. ಅಂಬೇಡ್ಕರ್, ಮಹಾತ್ಮ ಗಾಂಧಿ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು. ಉಪನ್ಯಾಸಕಿ ವಂದನಾ ಶೆಟ್ಟಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಕೆಎಲ್‌ಇ ಸಂಸ್ಥೆಯ ಎಂ.ಆರ್.ಸಾಖರೆ ಇಂಗ್ಲಿಷ್ (ರಾಜ್ಯ) ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಎನ್‌ಸಿಸಿ ವಿದ್ಯಾರ್ಥಿಗಳು ಕವಾಯತು ಪ್ರದರ್ಶಿಸಿದರು. ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜರೋಹಣ ನೆರವೇರಿಸಲಾಯಿತು.
ಪ್ರಾಂಶುಪಾಲ ಶೀತಲ್ ತಿವಾರಿ ಮಾತನಾಡಿ, ‘ದೇಶದ ಏಕತೆ, ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಹೊಣೆ’ ಎಂದರು.
ಮೈಂಡ್ ಸ್ಪಾರ್ಕ್‌ನಲ್ಲಿ ಅತಿಹೆಚ್ಚು ಸ್ಪಾರ್ಕ್ ಗಳಿಸಿದ ಅದಿತಿ ಕಟ್ಟಿಮನಿಗೆ ಟ್ಯಾಬ್ ವಿತರಿಸಿ ಪ್ರೋತ್ಸಾಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರು, ಎನ್‌ಸಿಸಿ ಮೇಜರ್ ಶಿವಾನಂದ ಅವರು ಪ್ರಾಂಶುಪಾಲರೊಂದಿಗೆ ಸಾಧಕ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಪದಕ, ಪ್ರಶಸ್ತಿಪತ್ರ ವಿತರಿಸಿದರು. ಆರತಿ ಹಾಗೂ ವೀರಪ್ರಸಾದ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.