ADVERTISEMENT

ಪುಷ್ಪದಿಂದ ಸಿಂಗಾರಗೊಂಡ ಪುಷ್ಪಕ ವಿಮಾನ...

ತೋಟಗಾರಿಕೆ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 14:40 IST
Last Updated 13 ಅಕ್ಟೋಬರ್ 2018, 14:40 IST
ಹುಬ್ಬಳ್ಳಿಯ ಇಂದಿರಾ ಗಾಜಿನಮನೆಯಲ್ಲಿ ನಡೆದಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿಮಾನದ ಪ್ರತಿಕೃತಿ
ಹುಬ್ಬಳ್ಳಿಯ ಇಂದಿರಾ ಗಾಜಿನಮನೆಯಲ್ಲಿ ನಡೆದಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿಮಾನದ ಪ್ರತಿಕೃತಿ   

ಹುಬ್ಬಳ್ಳಿ: ನಿತ್ಯ ಹತ್ತಾರು ವಿಮಾನಗಳು ಹುಬ್ಬಳ್ಳಿ–ಧಾರವಾಡ ನೆತ್ತಿಯ ಮೇಲೆ ಹಾರಾಡುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ದರ್ಜೆಗೆ ಏರಿದ ಹಿನ್ನೆಲೆಯಲ್ಲಿ ಲೋಹದ ಹಕ್ಕಿಗಳ ಹಾರಾಟವೂ ಜೋರಾಗಿದೆ.

ಅದೇ ಮಾದರಿಯ ವಿಮಾನ ಶನಿವಾರ ಇಂದಿರಾ ಗಾಜಿನಮನೆಯಲ್ಲಿ ‘ಲ್ಯಾಂಡ್‌’ ಆಗಿತ್ತು. ಇದು ಅಂತಿಂತ ವಿಮಾನವಲ್ಲ. ಪುಷ್ಪಗಳನ್ನು ಮೈಮೇಲೆ ಮುಡಿದುಕೊಂಡು ಪುಷ್ಪಕ ವಿಮಾನ!

ತೋಟಗಾರಿಕೆ ಇಲಾಖೆ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿ ಆರಂಭವಾಗಿರುವ ಮೂರು ದಿನಗಳ ಫಲ‍ಪುಷ್ಪ ಪ್ರದರ್ಶನದಲ್ಲಿ ಈ ವಿಮಾನ ವಿಶೇಷ ಆಕರ್ಷಣೆಯಾಗಿದೆ.

ADVERTISEMENT

ಬಿಳಿ, ಕೆಂಪು ಹಾಗೂ ತಿಳಿಗೆಂಪು ಬಣ್ಣದ ಗುಲಾಬಿ ಹೂಗಳನ್ನು ಬಳಸಿ ವಿಮಾನದ ಪ್ರತಿಕೃತಿಯನ್ನು ಕಲಾವಿದ ರಾಜು ಸೋನಾವನೆ ರಚಿಸಿದ್ದಾರೆ. ಗಾಜಿನಮನೆಯ ತುಂಬ 282 ರೈತರು ಬೆಳೆದ ವಿವಿಧ ಫಲ–ಪುಷ್ಪ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದೆ. ತರಹೇವಾರಿ ಹೂಗಳು ಇಡೀ ಆವರಣಕ್ಕೆ ವಿಶೇಷ ಕಳೆಯನ್ನು ತಂದಿವೆ.

ಕಲಾವಿದ ಇಸ್ಮಾಯಿಲ್‌ ತಲವಾಯಿ ಅವರು ಕಲ್ಲಂಗಡಿ ಹಣ್ಣಿನಲ್ಲಿ ಬಿಡಿಸಿದ ಚಿತ್ರಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿದರು. ಪರಮೇಶ್ವರ, ಯೇಸು ಕ್ರಿಸ್ತ, ಮಸೀದಿ, ಗೌತಮ ಬುದ್ಧ, ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷಚಂದ್ರ ಬೋಸ್‌, ಭಗತ್‌ ಸಿಂಗ್‌, ಸಂಗೊಳ್ಳಿ ರಾಯಣ್ಣ, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್‌, ಡಾ.ದ.ರಾ.ಬೇಂದ್ರೆ, ಗಿರೀಶ ಕಾರ್ನಾಡ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಖ್ಯಾತನಾಮರನ್ನು ಹಣ್ಣಿನಲ್ಲಿ ಪಡಿಮೂಡಿಸಿದ್ದಾರೆ.

ವಿವಿಧ ಗಾತ್ರದ ಮೆಣಸಿನಕಾಯಿ, ಪೇರಲ, ತೆಂಗಿನಕಾಯಿ, ಟೊಮೆಟೊ ತರಕಾರಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ತೋಟಗಾರಿಕೆ ಇಲಾಖೆ ರೈತರಿಗೆ ನೀಡುವ ಪಾಲಿ ಹೌಸ್‌, ಉಳ್ಳಾಗಡ್ಡಿಯನ್ನು ಸಂಗ್ರಹಿಸುವ ಸಾಧನವನ್ನು ಪ್ರಾತ್ಯಕ್ಷಿಕೆಯಲ್ಲಿಡಲಾಗಿತ್ತು.

ಕುಂದಗೋಳ ಶಾಸಕ ಸಿ.ಎಸ್‌.ಶಿವಳ್ಳಿ ಫಲಪುಷ್ಪ ಮೇಳಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿದಂತೆ ಹಲವು ಜನಪ್ರತಿನಿಧಿಗಳು ಈ ಸಂದರ್ಭದಲ್ಲಿದ್ದರು.

ಪ್ರದರ್ಶನದ ಕುರಿತು ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ಮಡಿವಾಳ, ‘ಮೂರು ದಿನಗಳ ಈ ಫಲಪುಷ್ಪ ಪ್ರದರ್ಶನದಲ್ಲಿ ರೈತರಿಗೆ ಇಲಾಖೆಯ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ರೈತರ ಸಾಹಸಗಾಥೆ, ತೋಟಗಾರಿಕೆ ತಜ್ಞರ ಸಾಹಸದ ಕಥೆಗಳನ್ನು ಪರದೆಯಲ್ಲಿ ತೋರಿಸಲಾಗುವುದು. ಜೊತೆಗೆ, ತಾರಸಿ ಮೇಲೆ ಕೃಷಿ, ಅತಿ ಕಡಿಮೆ ನೀರು ಬಳಸಿ ಬೆಳೆಯಬಹುದಾದ ತರಕಾರಿಗಳ ಬಗ್ಗೆ ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ’ ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿಲ್ಪಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.