ADVERTISEMENT

ಜನಪದ ಕಲಾವಿದರು ನಾಡಿನ ಧ್ವನಿ: ಕೆ.ಎಚ್.ಚನ್ನೂರ

‘ಹಾಡಿರೇ ರಾಗಗಳ-ತೂಗಿರೇ ದೀಪಗಳ’ ಕಾರ್ಯಕ್ರಮ: ಕೆ.ಎಚ್.ಚನ್ನೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:57 IST
Last Updated 20 ನವೆಂಬರ್ 2025, 4:57 IST
ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದರು ಜನಪದ ಗೀತೆ ಹಾಡಿದರು
ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದರು ಜನಪದ ಗೀತೆ ಹಾಡಿದರು   

ಧಾರವಾಡ: ‘ಗ್ರಾಮೀಣ ಜನಪದ ಸಂಸ್ಕೃತಿ ಉಳಿಸಿ ಬೆಳೆಸುವುದು ‘ಹಾಡಿರೇ ರಾಗಗಗಳ-ತೂಗಿರೇ ದೀಪಗಳ’ ಕಾರ್ಯಕ್ರಮ ಆಶಯವಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ಸಾಧನಕೇರಿಯ ದ.ರಾ.ಬೇಂದ್ರೆ ಭವನದಲ್ಲಿ ಬುಧವಾರ ನಡೆದ ‘ಹಾಡಿರೇ ರಾಗಗಳ-ತೂಗಿರೇ ದೀಪಗಳ’ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಜನಪದ ಕಲಾವಿದರು ನಾಡಿನ ಧ್ವನಿಯಾಗಿದ್ದಾರೆ. ಹಳ್ಳಿಯ ಜನಪದ ಸಂಸ್ಕೃತಿ ಬಿಂಬಿಸುವ ಸಾಂಪ್ರದಾಯಿಕ ಹಾಡುಗಳು, ಇತಿಹಾಸದ ಹೋರಾಟಗಾರರ ಶೌರ್ಯ, ಬಲಿದಾನದ ಮಹಿಮೆ ಸಾರುವ ಲಾವಣಿಗಳ ಪರಂಪರೆಯ ಪ್ರತೀಕವಾಗಿವೆ. ಅವುಗಳನ್ನು ಕೇಳಬೇಕು. ಯುವಜನರಿಗೆ ವೈಶಿಷ್ಟ್ಯವನ್ನು ತಿಳಿಸಬೇಕು. ಕಲೆಯನ್ನು ಆಸ್ವಾದಿಸಬೇಕು’ ಎಂದು ಹೇಳಿದರು.

ADVERTISEMENT

ಬೇಂದ್ರೆ ಟ್ರಸ್ಟ್‌ ಅಧ್ಯಕ್ಷ ಸರಜೂ ಕಾಟ್ಕರ್ ಮಾತನಾಡಿ, ‘ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿಯ ಜನಪದ ಕಲೆಯಾದ ಸೋಲಿಗರ ಹಾಡುಗಳು ಅದ್ಭುತವಾದವು. ನೆರೆಯ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಸಾಂಪ್ರದಾಯಿಕ ಕಲೆಗಳ ಮಿಶ್ರಣವಾಗಿರುವ ಅಪರೂಪದ ಕಲೆಯಾಗಿದೆ. ಅವರ ಹಾಡಿನ ಸಾಲುಗಳಿಂದ ಈ ಕಾರ್ಯಕ್ರಮದ ಶೀರ್ಷಿಕೆ ಆಯ್ದುಕೊ‌ಳ್ಳಲಾಗಿದೆ’ ಎಂದರು.

‘ಕವಿತೆಗಳನ್ನು ರಾಗಗಳಿಗೆ ಲಯಬದ್ಧವಾಗಿ ಪೋಣಿಸಿದಾಗ ಮಾತ್ರ ಅವುಗಳು ಜನರ ಹೃದಯ ಗೆಲ್ಲುವ ಹಾಡುಗಳಾಗಲು ಸಾಧ್ಯವಾಗುತ್ತವೆ. ಜನಪದ ಕಲಾವಿದರು ಲೋಕಾನುಭವದಿಂದ ಸಾಹಿತ್ಯ ನಿರ್ಮಾಣ ಮಾಡಿದ್ದಾರೆ. ಅವರು ಯಾರೂ ಗೀತೆಗಳ ಕೆಳಗೆ ಹೆಸರನ್ನು ಬರೆಯಲಿಲ್ಲ. ಗೀತೆಗಳು ಜನರಿಂದ ಜನರಿಗೆ ಬಂದಂಥವು. ಅವು ಜನಪದ ಸಾಹಿತ್ಯವಾಗಿ ಇಂದಿಗೂ ಪ್ರಸ್ತುತ’ ಎಂದು ತಿಳಿಸಿದರು.

ಬೇಂದ್ರೆ ಟ್ರಸ್ಟ್ ಸದಸ್ಯ ಇಮಾಮಸಾಬ ವಲ್ಲೆಪ್ಪನವರ, ಪ್ರಭು ಕುಂದರಗಿ ಹಾಗೂ ಜನಪದ ಕಲಾವಿದೆ ಸಾವಿತ್ರಿ ಪೂಜಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು.

ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎಚ್.ಚನ್ನೂರ ಮಾತನಾಡಿದರು
ಪರಿಶಿಷ್ಟ ಜಾತಿಯ ಕಲಾವಿದರನ್ನು ಪ್ರೋತ್ಸಾಹಿಸಲು ಸರ್ಕಾರವು ಈ ಕಾರ್ಯಕ್ರಮ ಅನುಷ್ಠಾನಗೊಳಿಸಿರುವುದು ಔಚಿತ್ಯಪೂರ್ಣವಾಗಿದೆ. ಜನಪದ ಕಲಾವಿದರಿಗೆ ಇಂಥ ವೇದಿಕೆಗಳು ಅವಕಾಶ ಕಲ್ಪಿಸುತ್ತವೆ
ಚಂದ್ರಕಾಂತ ಬೆಲ್ಲದ ಅಧ್ಯಕ್ಷ ಕರ್ನಾಟಕ ವಿದ್ಯಾವರ್ಧಕ ಸಂಘ

ಸಂಗೀತ ಗಾಯನ ಪ್ರಸ್ತುತಿ

ಸಾವಿತ್ರಿಬಾಯಿ ಪೂಜಾರ ಮತ್ತು ವೃಂದದವರು ಗೀಗೀ ಪದಗಳು ಶರೀಫ್ ದೊಡ್ಡಮನಿ ಮತ್ತು ವೃಂದ ಹಾಗೂ ಯಕ್ಕೇರೆಪ್ಪ ನಡುವಿನಮನಿ ಮತ್ತು ತಂಡದವರು ತತ್ವಪದಗಳನ್ನು ಹಾಡಿದರು. ಶ್ರೀಧರ ಭಜಂತ್ರಿ ಮತ್ತು ವೃಂದದವರು ಶಹನಾಯಿ ವಾದನ ಮಡಿವಾಳಪ್ಪ ಭಜಂತ್ರಿ ಮತ್ತು ವೃಂದದವರು ವಚನ ಗಾಯನ ಪ್ರಸ್ತುತಪಡಿಸಿದರು. ಅಶ್ವಿನಿ ಉಳ್ಳಿಕಾಶಿ ಮತ್ತು ವೃಂದದವರು ಭಾವಗೀತೆ. ಸ್ಟಿಫನ್ ಲುಂಜಳ ಮತ್ತು ವೃಂದದವರು ವಾದ್ಯ ಸಂಗೀತ ಚನ್ನಮ್ಮ ಹುಲಮನಿ ಮತ್ತು ತಂಡದವರು ಸೋಬಾನೆ ಹಾಡುಗಳು ಮಹಾಂತೇಶ ದೊಡಮನಿ ಮತ್ತು ವೃಂದದವರು ಹೋರಾಟದ ಹಾಡುಗಳು ಕೀರ್ತನಾ ನಾಯಕ ಮತ್ತು ವೃಂದದವರು ಸುಗಮ ಸಂಗೀತ ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.