ADVERTISEMENT

ಅಂತರ ಮರೆತು ಖರೀದಿಗೆ ಮುಗಿಬಿದ್ದರು

ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ನಿಯಮ ಲೆಕ್ಕಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 23 ಮೇ 2020, 16:09 IST
Last Updated 23 ಮೇ 2020, 16:09 IST
ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿ ಶನಿವಾರ ಖರೀದಿಯಲ್ಲಿ ನಿರತರಾಗಿದ್ದ ಜನ
ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿ ಶನಿವಾರ ಖರೀದಿಯಲ್ಲಿ ನಿರತರಾಗಿದ್ದ ಜನ   

ಹುಬ್ಬಳ್ಳಿ: ಈದ್‌ ಉಲ್‌ ಫಿತ್ರ್‌ ಹಬ್ಬಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆಯೇ ನಗರದ ಪ್ರಮುಖ ಮಾರುಕಟ್ಟೆ ಕೇಂದ್ರವಾದ ದುರ್ಗದ ಬೈಲ್‌ನಲ್ಲಿ ಶನಿವಾರ ಗಿಜಿಗುಡುತ್ತಿತ್ತು. ಕೊರೊನಾ ಸೋಂಕು ಹರಡುವ ಭೀತಿಯಿದ್ದರೂ ಜನ ಅದನ್ನು ಲೆಕ್ಕಸದೇ ಖರೀದಿಗೆ ಮುಗಿಬಿದ್ದಿದ್ದರು.

ಸೋಂಕು ಹರಡುವ ಆತಂಕದಿಂದ ಎರಡು ತಿಂಗಳು ಲಾಕ್‌ಡೌನ್‌ ಘೋಷಣೆಯಾಗಿತ್ತು. ಸಡಿಲಿಕೆಯಾದ ಬಳಿ ಕೆಲ ಅಂಗಡಿಗಳಿಗೆ ಷರತ್ತುಬದ್ಧವಾಗಿ ತೆರೆಯಲು ಅನುಮತಿ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿರಬೇಕು ಎನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಲಾಗಿತ್ತು. ಆದರೆ ದುರ್ಗದ ಬೈಲ್‌ನಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಹಾಗೂ ಗ್ರಾಹಕರು ಇದನ್ನೆಲ್ಲ ಮರೆತಂತಿದ್ದರು.

ಜನತಾ ಬಜಾರ್‌ನಲ್ಲಿ ತರಕಾರಿ ಮಾರುಕಟ್ಟೆ ಇಲ್ಲದ ಕಾರಣಕ್ಕೆ ಬಹಳಷ್ಟು ಜನ ತರಕಾರಿ ಹಾಗೂ ಕಾಯಿಪಲ್ಲೆ ಖರೀದಿಸಲು ದುರ್ಗದ ಬೈಲ್‌ಗೆ ಬಂದಿದ್ದರು. ಅನೇಕ ಮುಸ್ಲಿಮರು ರಂಜಾನ್‌ ಹಬ್ಬಕ್ಕೆ ಹೊಸ ಬಟ್ಟೆ, ಆಲಂಕಾರಿಕ ವಸ್ತುಗಳು. ಸಿಹಿ ತಿನಿಸು ತಯಾರಿಸಲು ಬೇಕಾಗುವ ಅಗತ್ಯ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಶ್ಯಾವಿಗೆ, ಗೋಡಂಬಿ, ದ್ರಾಕ್ಷಿ, ಬದಾಮಿ ಖರೀದಿಸಲು ಹೆಚ್ಚಿನ ಬೇಡಿಕೆ ಕಂಡು ಬಂತು.

ADVERTISEMENT

ಆದರೆ, ಬಹಳಷ್ಟು ಜನ ಮಾಸ್ಕ್‌ ಧರಿಸಿರಲಿಲ್ಲ. ಅಂತರವಂತೂ ಯಾರೂ ಕಾಯ್ದುಕೊಂಡಿರಲಿಲ್ಲ. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7ರ ತನಕ ಸಂಪೂರ್ಣ ಲಾಕ್‌ಡೌನ್‌ ಮತ್ತು ಕರ್ಫ್ಯೂ ವಿಧಿಸಿದ್ದ ಕಾರಣ ಸಂಜೆಯಾಗುತ್ತಿದ್ದಂತೆ ಮಾರುಕಟ್ಟೆ ರಂಗೇರುತ್ತಿತ್ತು. ರಂಜಾನ್‌ ಮುಗಿಯುವ ಶಹಬಜಾರ್‌ ಮಾರುಕಟ್ಟೆ ಆರಂಭಿಸದಿರಲು ನಿರ್ಧರಿಸಿದ ಕಾರಣ ದುರ್ಗದ ಬೈಲ್‌ ಮತ್ತು ಶಹಬಜಾರ್‌ ಮುಂದಿನ ರಸ್ತೆಯ ಬದಿಯಲ್ಲಿ ತಾತ್ಕಾಲಿಕ ಟೆಂಟ್‌ ಹಾಕಿ ಮಾರಾಟ ಮಾಡುತ್ತಿದ್ದ ಚಿತ್ರಣ ಕಂಡು ಬಂತು.

ಬಟ್ಟೆ ವ್ಯಾಪಾರಿ ಸಲೀಂ ಪಾಷಾ ‘ಈ ಬಾರಿ ವ್ಯಾಪಾರ ಕಡಿಮೆ. ದೂರದಿಂದಲೇ ವ್ಯವಹರಿಸಿ ಎಂದು ಹೇಳಿದರೂ ಯಾರೂ ಕೇಳುತ್ತಿಲ್ಲ. ಪ್ರಾಣದ ಭೀತಿ ನಡುವೆಯೇ ವ್ಯಾಪಾರ ಮಾಡುವುದು ನನಗೂ ಅನಿವಾರ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.