ADVERTISEMENT

ಕಾಂಗ್ರೆಸ್ ಕಮಿಷನ್ ಪಡೆದಿದ್ದರೆ ಬಿಜೆಪಿ ಸರ್ಕಾರ ತನಿಖೆ ಮಾಡಲಿ: ಪರಮೇಶ್ವರ್ ಸವಾಲು

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಆರೋಪಕ್ಕೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 3:01 IST
Last Updated 28 ಆಗಸ್ಟ್ 2022, 3:01 IST
ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ್
ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ್   

ಹುಬ್ಬಳ್ಳಿ: ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರು ಕಾಂಗ್ರೆಸ್ ನಿಂದ ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸುವ ಸರ್ಕಾರ, ಆ ಬಗ್ಗೆ ತನಿಖೆ ನಡೆಸಲಿ.‌ ಆಗ, ಬಿಜೆಪಿಯವರು ತಗೊಂಡಿದ್ದಾರೊ ಅಥವಾ ನಾವು ಪಡೆದಿದ್ದೇವೋ ಎಂಬುದು ಗೊತ್ತಾಗುತ್ತದೆ. ಹೇಗಿದ್ದರೂ ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ ಎಂದು ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ್ ಸವಾಲು ಹಾಕಿದರು.

ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರು ಮಾಡುತ್ತಿರುವ ಕಮಿಷನ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುವುದಾದರೆ, ಆ ಬಗ್ಗೆಯೂ ಸರ್ಕಾರ ತನಿಖೆ ಮಾಡಲಿ ಎಂದರು.

ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಕುರಿತು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸಾ) ಸಹ ಪ್ರಧಾನಿಗೆ ಪತ್ರ ಬರೆದಿದೆ. ಅದರೊಂದಿಗೆ ಸರ್ಕಾರವು ಇಲಾಖಾವಾರು ನಡೆಸುತ್ತಿರುವ ಭ್ರಷ್ಟಾಚಾರವು ಜಗಜ್ಜಾಹೀರಾಗುತ್ತಿದೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂತಹ ಭ್ರಷ್ಟಾಚಾರಗಳ ಕುರಿತು ತನಿಖೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಇಂತಹದ್ದು ಸಾಮಾನ್ಯ: 137 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ನಲ್ಲಿ ಹಲವು ನಾಯಕರು ಪಕ್ಷವನ್ನು ತೊರೆದಿದ್ದಾರೆ ಮತ್ತು ಒಡೆದಿದ್ದಾರೆ. ಅದಕ್ಕೆ ಈಗ ಗುಲಾಂ ನಬಿ ಆಜಾದ್ ಸಹ ಸೇರಿದ್ದಾರೆ. ಇಂತಹ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಇಲ್ಲಿಂದ ಹೋದವರು ಬೇರೆ ಕಡೆಯೂ ದೊಡ್ಡ ನಾಯಕರಾಗಿದ್ದಾರೆ. ಇವೆಲ್ಲದರ ನಡುವೆಯೂ ಪಕ್ಷ ಉಳಿದಿದೆ. ಹೊಸ ನಾಯಕತ್ವ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ದೇಶದ ಪ್ರತಿ ಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಪಕ್ಷಕ್ಕೆ ಅವರೇ ಶಕ್ತಿ ತುಂಬಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ಮೋಹನ ಅಸುಂಡಿ, ದೇವಕಿ ಯೋಗಾನಂದ, ಅನ್ವರ ಮುಧೋಳ, ಬಾಬಾಜಾನ ಮುಧೋಳ, ಪಾರಸಮಲ್ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.