ADVERTISEMENT

ಗಡ್ಕರಿಗೆ ಜೀವ ಬೆದರಿಕೆ: ಕರೆ ಹಿನ್ನೆಲೆ, ಮಾರ್ಗದರ್ಶಕರ ಪತ್ತೆಗೆ ಕ್ರಮ -ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 5:45 IST
Last Updated 16 ಜನವರಿ 2023, 5:45 IST
ಬಸವರಾಜ ಬೊಮ್ಮಾಯಿ‌
ಬಸವರಾಜ ಬೊಮ್ಮಾಯಿ‌    

ಹುಬ್ಬಳ್ಳಿ: ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ‌ ಕರೆ ಬಂದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೆಯ ಹಿಂದೆ ಯಾರಿದ್ದಾರೆ, ಹಿನ್ನೆಲೆ ಏನು ಹಾಗೂ ಯಾರು ಮಾರ್ಗದರ್ಶನ ನೀಡಿದ್ದಾರೆ ಎಂಬುದು ಮುಖ್ಯವಾಗಿದ್ದು, ಅದನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಗೆ ವಿನಾಶದ ಕನಸುಗಳು

ADVERTISEMENT

'ಯುವ ಜನೋತ್ಸವವನ್ನು, ಯುವ ವಿನಾಶೋತ್ಸವ' ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರದ್ದು ಯಥಾ ಬುದ್ಧಿ, ತಥಾ ಮಾತುಗಳು.‌ ಅವರಿಗೆ ವಿನಾಶದ ಕನಸುಗಳು, ಅದರಲ್ಲೂ ಕಾಂಗ್ರೆಸ್ ವಿನಾಶದ ಕನಸುಗಳು ಬೀಳುತ್ತಿವೆ. ಎಲ್ಲದರಲ್ಲೂ ಅವರು ವಿನಾಶವನ್ನೇ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಒಳ್ಳೆಯ ಕೆಲಸವನ್ನು ಮೆಚ್ಚುವುದು ಕಾಂಗ್ರೆಸ್ ನವರಿಗೆ ಗೊತ್ತಿಲ್ಲ. ಇತ್ತೀಚೆಗೆ ಅವರ ಭಾಷೆ, ನಡವಳಿಕೆ ಹಾಗೂ ಚಿಂತನೆ ಕೀಳುಮಟ್ಟದಿಂದ ಕೂಡಿವೆ. ದೇಶ ಹಾಗೂ ರಾಜ್ಯದ ಪ್ರಗತಿ ವಿಚಾರದಲ್ಲಿ ತೀರಾ ತಳಮಟ್ಟಕ್ಕಿಳಿಯುತ್ತಿರುವುದು, ಅವರ ಹತಾಶೆಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು‌ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಿಯಾಂಕ ಗಾಂಧಿ ಅವರ ನಾ‌ ನಾಯಕಿ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಾ ನಾಯಕಿ ಎಂದು ಸ್ವಯಂ ಆಗಿ ಹೇಳಿಕೊಳ್ಳುವ ಸ್ಥಿತಿ ಅವರಿಗೆ ಬಂದಿದೆ. ಅವರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ಸಿದ್ಧರಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಯು ಜನೋತ್ಸವವು ಅರ್ಥಪೂರ್ಣವಾಗಿ ನಡೆದಿದ್ದು, ಯುವಜನರಿಗೆ ಸ್ಫೂರ್ತಿ ನೀಡಿದೆ. ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ. ರಾಜ್ಯ ಸರ್ಕಾರ ತನ್ನ ಯುವ ನೀತಿಯಲ್ಲಿ ಗ್ರಾಮೀಣ ಪ್ರದೇಶದ ಕಬಡ್ಡಿ, ಕೊಕ್ಕೊ ಸೇರಿದಂತೆ ಐದು ಕ್ರೀಡೆಗಳನ್ನು ಉತ್ತೇಜಿಸಲು ಕ್ರಮ ಕೈಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.