ADVERTISEMENT

ಆಲಾರೆ ಆಲಾ. ಗಣಪತಿ ಆಲಾ..ಗೇಲಾರೆ ಗೇಲಾ...

ಹುಬ್ಬಳ್ಳಿ–ಧಾರವಾಡ ಮೆಟ್ರೊ

ಎಸ್.ರಶ್ಮಿ
Published 11 ಸೆಪ್ಟೆಂಬರ್ 2019, 19:30 IST
Last Updated 11 ಸೆಪ್ಟೆಂಬರ್ 2019, 19:30 IST
ಚೌತಿ ಹಬ್ಬಕ್ಕೆ ಹುಬ್ಬಳ್ಳಿಯ ಐಶ್ವರ್ಯ ಗುಜಮಗಡಿ ಬಿಡಿಸಿದ 8X4 ಅಡಿ ಗಣೇಶನ ರಂಗೋಲಿ
ಚೌತಿ ಹಬ್ಬಕ್ಕೆ ಹುಬ್ಬಳ್ಳಿಯ ಐಶ್ವರ್ಯ ಗುಜಮಗಡಿ ಬಿಡಿಸಿದ 8X4 ಅಡಿ ಗಣೇಶನ ರಂಗೋಲಿ   

ಹಿಂಗಂದು ಕೂಡ್ಲೆ ನನಗ, ನಮ್ಮನಿಯೊಳಗ ಕರಿಗಡಬು ಕರಿಯುವ ವಾಸನಿ ಮೂಗರಳುಸುವ ಹಂಗ ಮಾಡ್ತದ. ಹಂಗೇ ಮನಿಯೊಳಗ ಜಗುಲಿ ಮಾಡಿ, ಗಣಪ್ಪಗೊಂದು ಜಾಗ ಮಾಡೂದು, ಬಣ್ಣಬಣ್ಣದ ಪರಪರಿ, ಚಿತ್ರ, ಚಿತ್ತಾರ, ಬೀಸಣಕಿಯಂಥ ಪ್ರಭಾವಳಿ, ಮಿಂಚು, ಮೆರುಗು, ಐದು ಥರದ ಹಣ್ಣು, ಕುರುಕಲು ಎಲ್ಲಾ ನೆನಪಾಗ್ತಾವ್ರಿ.

ಆಲಾ ರೆ ಆಲಾ.. ಅಂದ್ಕೂಡ್ಲೆ ಗಣಪತಿಗಿಂತ ಮೊದಲು ಚಿತ್ತಭಿತ್ತಿಯೊಳಗ ಇವೇ ದೃಶ್ಯ ಮೂಡಿದ್ರೂ ಕಿವಿಯೊಳಗ ಗಣಪತಿ ಆಲಾ ಅನ್ನೂದು ಕೀರಲು ಧ್ವನಿಯೊಳಗ ಹಿಂಬಾಲಿಸಿನೆ ಬಿಡ್ತದ.

ಈ ನಾಲ್ಕು ಪದದೊಳಗ ಇರುವ ಜೋಷ್‌ ಅದ ಅಲ್ಲ, ಅದು ನಮ್ಮ ಕಬೀರನ ದೋಹೆಯೊಳಗ ಢಾಯಿ ಅಕ್ಕರ ಪ್ರೇಮಕೆ ಒಳಗ ಇರದಷ್ಟು ಶಕ್ತಿ, ಜೋಷ್‌, ಕೌತುಕ, ಕುತೂಹಲ, ಆಕರ್ಷಣೆ ಎಲ್ಲಾ ಬಚ್ಚಿಟ್ಕೊಂಡದಪಾ.. ಇದೊಂದೇ ಅಲ್ಲ, ಇದರ ಬಾಲಂಗೋಸಿ ಹಂಗ ‘ಏಕ್‌ ದೋ ತೀನ್‌ ಚಾರ್‌.. ಗಣಪತಿ ಕಾ ಜೈಜೈಕಾರ್‌’, ‘ಗಣಪತಿ ಬಪ್ಪಾ ಮೋರಯಾ.., ವರ್ಷಾ ವರ್ಷಿ ಲೌಕರ್‌ ಯಾ’ ಇವೆಲ್ಲ ಹಿಮ್ಮೇಳದೊಂದಿಗೆ ಕೇಳ್ತಾವ್ರಿ. ಒಂದು ಮಣಿ ಮ್ಯಾಲೆ ನಮ್ಮ ಗಣಪ್ಪ ಕುಂತು ಮನಿಕಡೆ ಹೊಂಟ ಅಂದ್ರ, ಜಾಗಟಿ, ಗಂಟಿ, ಚಳ್ಳಂ ಚುಳ್ಳಂ ಎಲ್ಲಾ ಬಾರಸ್ಕೊಂತ ಗೆಳೆಯರ ಗುಂಪಿನ ಹಿಮ್ಮೇಳ ಇರ್ತಿತ್ತು. ಆರತಿ ಕಳಸ ಹಿಡಕೊಂಡು ಮನಿ ಮಗಳು ಮುಂದ ಹೊಂಟ್ರ, ಹಬ್ಬದ ಸಂಭ್ರಮವೇ ಆ ಮೆರವಣಿಗಿಯೊಳಗ ಕಾಣ್ತಿತ್ತು.

ADVERTISEMENT

ಈ ಭಾದ್ರಪದದೊಳಗ ಬರೂಮಳಿನೂ ಭಾರಿ ಅದರಿಪಾ. ಆಷಾಢ, ಶ್ರಾವಣದೊಳಗ ಕುಂಭದ್ರೋಣದ್ಹಂಗ ಸುರದು, ಆಕಾಶಿಗೇ ತೂತು ಮಾಡೇದೇನೋ ಅನ್ನೂಹಂಗ ಸುರೀತಿತ್ತು. ಭಾದ್ರಪದ ಬಂದ್ರ ಸಾಕು, ಗಣಪ್ಪಗ ಹೆದರಿ ಹಿಟ್ಟು ಸೋಸಿದ್ಹಂಗ ತುಷಾರ ತುಂತುರು ಮಳಿ. ಚುಚ್ಚೂದಿಲ್ಲ ಒಂದೀಟೂ.. ಆದ್ರ ನೆನಸ್ದೇ ಬಿಡೂದು ಇಲ್ಲ. ಗಣಪ್ಪ ತನ್ನ ದೊಡ್ಡ ಕಿವಿಯಿಂದ ಗಾಳಿ ಬೀಸಿದ್ಹಂಗ ಹಿತವೆನಿಸುವ ಗಾಳಿ, ಸೊಂಡಿಲೇ ನೀರು ಬಿಟ್ಹಂಗ ಮಳಿ. ಒಟ್ನಾಗ ಅರಾಮನಿಸುವಂಥ ವಾತಾವರಣ.

ಅವಾಗ ನಮ್ಮ ಬೆನಕ, ಪಿತಾಂಬರ ಉಟ್ಟು, ಗುಲಾಬಿ ಕೆನ್ನೆ, ಕಿವಿ ಮಾಡ್ಕೊಂಡು, ಛಂದನ ಜೇನುಕಂಗಳ ಅರಳಿಸಿ, ನಮ್ಮೆಲ್ಲರ ಆಶೋತ್ತರಗಳನ್ನೂ ತನ್ನ ಹೊಟ್ಯಾಗ ಹಾಕ್ಕೊಂಡು, ಅದಕ್ಕೊಂದು ಮಿತಿ ಇರಲಿ ಅಂತ ಲಾಲಸೆಯ ಹಾವನ್ನೇ ಬಿಗಿದು, ಜೀವನ ಸಣ್ಣದು ಅಂತ ಸಣ್ಣಿಲಿ ಮ್ಯಾಲೆ ನಮ್ಮ ನಿರೀಕ್ಷೆಗಳ ಭಾರ ಹೊತ್ಗೊಂಡು ಕೂತಂಗ ಕುಂತ್ರ, ಕೈಮುಗಿದು ಕಣ್ಮುಚ್ಚೂದಕ್ಕಿಂತಲೂ ಮುದ್ದ್‌ ಮಾಡ್ಬೇಕಂತನುಸೂದೆ ಹೆಚ್ಗಿ. ಆದ್ರೂ ಹಿಂಗೆಲ್ಲ ವಿಚಾರ ಮಾಡಿದ್ರ.. ಸುಮ್ನಿರಬಹುದಾ ಅವರಮ್ಮ ಪಾರ್ವತಿ, ಅವರಪ್ಪ ಶಿವ.. ಅದಕ್ಕ.. ಗಣಪತಿ ಮುಂದ ಬಸ್ಕಿ ಹಾಕಾಕ ಹೇಳೂದು. ಅದೂ ಕತ್ತರಿ ಕೈ ಹಾಕ್ಕೊಂಡು, ನಮ್ಮ ಕಿವಿ ನಾವೇ ಹಿಡ್ಕೊಂಡು, ಹಿಂಡ್ಕೊಂಡು, ಬಸ್ಕಿ ಹಾಕೂಮುಂದ ಯಾಕೋ ಸೊಂಡಿ ಸಂದ್ಯಾಗ ನಮ್ಮ ಏಕದಂತ ನಕ್ಕಂಗನಸ್ತದ.

ಹಿಂಗ ನೋಡ್ರಿ, ಗಣೇಶನ ಬಗ್ಗೆ ಹೇಳಾಕ ಕುಂತ್ರ ಬಿಡುವನ್ನೂದು ಇರೂದಿಲ್ಲ. ತಿಂಡಿಪೋತಗ ಎಷ್ಟು ಖಾದ್ಯ ಇಟ್ರೂ ಸಮಾಧಾನ ಆಗದೇ ಅಂಗೈಯಾಗ ಒಂದು ಲಾಡು ಇಟ್ಟು, ಉಳಿದದ್ದೆಲ್ಲ ನಿನಗಪಾ ಗಣಪಾ.. ಅಂತ ದೈನ್ಯವಾಗಿ ಅವನ ಮುಂದ ನಿಂದರ್ತೇವಲ್ಲ.. ಆ ಚಿತ್ರ ಮರಿಯಾಕ ಆಗೂದಿಲ್ಲ.

ಇದೆಲ್ಲ ಒತ್ತಟ್ಟಿಗಿರಲಿ... ಈ ಗಣೇಶ ಮಂಡಳದೊಳಗ ಅಂಗಳದ ತುಂಬೆಲ್ಲ ಗುಲಾಲ್‌ ಚೆಲ್ಲಿ, ಚುರಮುರಿ, ಪಲಾವ್‌, ಚಿತ್ರನ್ನ, ಪುಳಿಯೋಗರೆ, ಕೇಸರಿಭಾತು, ಸಜ್ಜಕ ಇಂಥ ಪ್ರಸಾದ ಹಂಚ್ತಾರಲ್ಲ.. ಆ ವಾಸನಿ ಸೈತ ನಂಗ ಈ ಆಲಾರೆ... ಆಲಾ ಧ್ವನಿ ಜೊತಿಗೆ ಬಂದ ಬಿಡ್ತಾವ್ರಿ. ಬೀದರ್‌ನಾಗಂತೂ ಗಣೇಶ ಮಂಡಳಕ್ಕ ಭಾರಿ ಶಿಸ್ತದ. ಎಲ್ಲಾರೂ ಐದ ದಿನ ಕೂರಸೋರು. ಚೌಬಾರಾ ಅಂತ ಒಂದು ಐತಿಹಾಸಿಕ ಸ್ಮಾರಕ ಅದ ಅಲ್ಲಿ, ಐದನೆ ದಿನ ಸಾಲುಗಟ್ಟಿ ಗಣಪತಿಗಳು ನಿಂತ್ರ, ಜಿಲ್ಲಾಧಿಕಾರಿ ಜೊತಿಗೆ ಎಲ್ಲ ಧರ್ಮದ ಮುಖಂಡರೂ ಗಣಪನಿಗೆ ಪೂಜೆ ಸಲ್ಲಿಸ್ತಾರ. ಆ ಮೆರವಣಿಗೆ ಹಂಗ ಸಾಗೂಮುಂದ.. ಕಿವಿಯೊಳಗ ಕೆಲವೊಮ್ಮೆ ಲೇಝಿಂ ರಿಧಂ ಕೇಳಿದ್ರ, ಇನ್ನೂ ಕೆಲವೊಮ್ಮೆ ‘ ತಲ್ವಾರ್‌ ಧಾರ್‌ (ಖಡ್ಗದಂಚು)’ಖಣಖಣಿಸುವ ಸದ್ದು ಕೇಳ್ತಿತ್ತು. ಕೋಲಾಟದ ಸದ್ದು, ಕಿವಿಗೆ ಇಂಪಿರ್ತಿತ್ತು.

ಜೊತಿಗೆ ಎಲ್ಲಾರಿಗೂ ಪ್ರಸಾದ ಹಂಚುವ ಹುಮ್ಮಸ್ಸು. ಈಗಲೇ ತಮ್ಮ ಮನದಾಸೆಗಳನ್ನು ಪೂರೈಸುವಂಥ ಸಂಬಂಧ ಸೂಚಕಗಳೂ ತೇಲ್ತಿದ್ದು. ಮಾಮಿ ತೊಗೊರಿ, ಮೌಶಿ ಹಿಡೀರಿ.. ಏ ಅತ್ತಿ, ಹಿಡಿ ನಿನಗ, ನಿನ್ಮಗಳಿಗೆ ಅನ್ಕೊಂತ ಗಣಪಗ ನೋಡಿದ್ರ.. ‘ಕೊಡು ಮಗನೆ ಕೊಡು ಭಾಳ ಲಗೂನೆ ಲಗ್ನಪತ್ರದೊಳಗ ನನ್ನ ಚಿತ್ರಾ ಬರೂಹಂಗ ಆಗಲಿ ಅಂತ ಗಣಪ್ಪ ಅಭಯ ಸೂಚಸ್ತಿದ್ನಪ್ಪಾ.

ಯಾವ ಡೀಜೆಗಳ ಆರ್ಭಟ ಇರ್ತಿರಲಿಲ್ಲ. ತೇಲುಗಣ್ಣು ಮೇಲುಗಣ್ಣು ಮಾಡ್ಕೊಂಡು ಕುಣದ್ಹಂಗ ನಡ್ಕೊಂತ, ನಡ್ಯಾಕಾಗದ್ಹಂಗ ಕುಣ್ಕೊಂತ ಹೋಗೋರ ಹಿಂಡು ಇರ್ತಿರಲಿಲ್ಲ. ಸುಮ್ನ ಗುಂಪಿನಾಗ ಅಂಗ್ಯಾಗ ಹಾವು ಬಿಟ್ಟೋರ ಹಂಗ ನಾಗಿನ್‌ ಡಾನ್ಸ್‌ ಮಾಡೋರು ಇರಲಿಲ್ರಿಪಾ.. ನಮ್ಮ ಗಣಪ್ಪಗ ಖರೇನೆ ಲಗು ಬಾರೋ ಬೆನಕಾ, ಕಾಯ್ತೇವಿ ನೀ ಬರು ತನಕಾ’ ಅಂತ ಒಂದು ವಿದಾಯವನ್ನು ಅಗ್ದಿ ಪ್ರೀತಿಯ, ಭಾವುಕ ಕ್ಷಣಗಳಾಗಸ್ತಿದ್ವಿ. ನಾ ಹೋಗಾಕ ಒಲ್ಲೆ ಅಂತ ದೇವರು, ಕಳಸಾಕ ಒಲ್ಲೆ ಅಂತ ಭಕ್ತರು. ಆದ್ರೂ ಸಮಯಕ್ಕೆಲ್ಲಿ ಕರುಣೆ? ನಿಷ್ಕರುಣಿಯಾಗಿ ವಿಸರ್ಜನೆಯ ಮೆರವಣಿಗೆ ಸಾಗ್ತಿತ್ತು.

ಆ ಇಡೀ ಮೆರವಣಿಗೆ ಕಣ್ತುಂಬಿ ಬರ್ತಿತ್ತು. ಒಂದು, ಮೂರು, ಐದು, ಏಳು, ಒಂಬತ್ತು ಅದೆಷ್ಟೇ ದಿನಗಳಿರಲಿ, ಗಣಪ್ಪನ ಕಳಿಸಿದ ಮ್ಯಾಲೆ ಮನಿ ಭಣಭಣ ಅನಸೂದು. ಆತ ಇರೂತನ ಮನಿನು ಗುಡಿ ಅನಸ್ತಿತ್ತಲ್ಲ, ಆ ಖಾಲಿತನಾ ತುಂಬಸಾಕ ಮಾತ್ರ ಮತ್ತ ಗಣಪ್ಪನ ಬರಬೇಕಿತ್ತು.

ಆದರೀಗ ಗಣಪ್ಪನ ಮುಂದ ಡೀಜೆ ಹಾಕಿ, ಕಣ್ಣು ಕುಕ್ಕುವ ಲೈಟು ಹಾಕಿ, ಯಾವರೆ ಹಾಡು ಹಚ್ಗೊಂಡು ಮೆರವಣಿಗಿ ಹೊಂಟ್ತಂದ್ರ ಗಣಪ್ಪ ತನ್ನ ಕಿವಿ ತಾನೇ ಮುಚ್ಗೊಂಡು, ಕುಕ್ಕುವ ಕಣ್ಣಿನಿಂದಾಗಿಯೇ ಕರಿನಯನಿ (ಗಜನಯನಿ)ಯಾದ್ಹಂಗ ಸಣ್ಣೂಕಣ್ಣು ಮಾಡ್ಕೊಂಡು, ಹೊಂಟೇ ಬಿಡ್ತಾನ. ಯವಾಗರೆ ಭೂಮಿ ಬಿಟ್ಟು, ಗಂಗಿ ಮಡಿಲಿಗೆ ಬೀಳ್ತೇನಪ್ಪ ಅನ್ನುವ ಅವಸರ ಅವನಿಗೂ... ಹಾಸ್ಗಿಗೆ ಬೀಳ್ತೇವಿ ಅನ್ನೂ ಅವಸರ ಭಕ್ತರಿಗೂ.. ಯಾಕೋ.. ಆಲಾರೆ ಆಲಾ.. ಗೇಲಾ ರೆ.. ಗೇಲಾ.. ಅಂದ್ಹಂಗ ಕೇಳಸ್ಲಿಕ್ಹತ್ತದ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.