ADVERTISEMENT

ವಿಘ್ನ ನಿವಾರಕನಿಗೆ ಸಂಭ್ರಮದ ವಿದಾಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 18:41 IST
Last Updated 10 ಸೆಪ್ಟೆಂಬರ್ 2019, 18:41 IST
ಗಣೇಶನ ಮೆರವಣಿಗೆ
ಗಣೇಶನ ಮೆರವಣಿಗೆ   

ಹುಬ್ಬಳ್ಳಿ: ನಗರದ ವಿವಿಧೆಡೆ ಒಂಬತ್ತು ದಿನಗಳ ಕಾಲ ಪ್ರತಿಷ್ಠಾಪನೆಗೊಂಡಿದ್ದ ವಿಘ್ನ ನಿವಾರಕ ಗಣೇಶ ಮೂರ್ತಿಗಳನ್ನು ಮಂಗಳವಾರ ಸಂಭ್ರಮದಿಂದ ಬೀಳ್ಕೊಡಲಾಯಿತು.

ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದಿಂದ ಹಳೇ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು ಭವ್ಯ ಮೆರವಣಿಗೆ ಮಾಡಲಾಯಿತು. ದುರ್ಗದ ಬೈಲ್‌ನಿಂದ ಆರಂಭವಾದ ಮೆರವಣಿಗೆ ಚನ್ನಪೇಟೆ, ಅರವಿಂದ ನಗರ, ಕಾರವಾರ ರೋಡ್‌, ಗಿರಣಿ ಚಾಳ ಮೂಲಕ ಬಂದು ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಬಾವಿಯಲ್ಲಿ ವಿಸರ್ಜಿಸಲಾಯಿತು.

ಗಣೇಶನ ಮೆರವಣಿಗೆ ವೇಳೆ ಕೇಸರಿ ರುಮಾಲು ಸುತ್ತಿಕೊಂಡು ಯುವಕರು ಗಮನ ಸೆಳೆದರು. ಕುಂಭಹೊತ್ತು ಸಾಗಿದ ಮಹಿಳೆಯರು, ವೀರಗಾಸೆ, ಕರಡಿಮೇಳದಿಂದ ಮೆರವಣಿ ಕಳೆಕಟ್ಟಿತ್ತು. ಡಿ.ಜೆ. ಅಬ್ಬರಕ್ಕೆ ಯುವಕರು ಕುಣಿದು, ಕುಪ್ಪಳಿಸಿದರು.

ADVERTISEMENT

ಸಮಿತಿ ಆಯೋಜಿಸಿದ್ದ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮವನ್ನು ಶಾಸಕ ಪ್ರಸಾದ ಅಬ್ಬಯ್ಯ ಉದ್ಘಾಟಿಸಿದರು. ಹೊಸೂರು ಬಾವಿಯ ಬಳಿ ಸಾರ್ವಜನಿಕರು ಮೂರ್ತಿಗಳನ್ನು ವಿಸರ್ಜಿಸುತ್ತಿದ್ದ ಚಿತ್ರಣ ಕಂಡು ಬಂತು. ರಾತ್ರಿ ಹೊತ್ತು ಹೆಚ್ಚಾದಷ್ಟೂ ಮೆರವಣಿಗೆ ರಂಗು ಪಡೆದುಕೊಳ್ಳುತ್ತಿತ್ತು.

ಜನಸಾಗರ:

ಒಂದೆಡೆ ಮೂರ್ತಿ ವಿಸರ್ಜನೆ ಜೋರಾಗಿದ್ದರೆ, ಇನ್ನೊಂದೆಡೆ 11ನೇ ದಿನಕ್ಕೆ ವಿಸರ್ಜನೆಯಾಗುವ ಗಣೇಶನ ಮೂರ್ತಿಗಳ ದರ್ಶನ ಪಡೆಯಲು ಸಾಕಷ್ಟು ಜನ ಬಂದಿದ್ದರು.

ಗಣೇಶ ಉತ್ಸವ ಮಂಡಳಿ ಸ್ಟೇಷನ್‌ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿ, ಮರಾಠಗಲ್ಲಿಯ ‘ಹುಬ್ಬಳ್ಳಿ ಶಾ ಮಹಾರಾಜ’, ದುರ್ಗದ ಬೈಲ್‌ನಲ್ಲಿರುವ ಮೂರ್ತಿ, ಹುಬ್ಬಳ್ಳಿ ಕಾ ರಾಜಾ ಮೂರ್ತಿಗಳನ್ನು ನೋಡಲು ಬೇಡಿಕೆ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.