ADVERTISEMENT

ಓಣಿ, ಬಡಾವಣೆಯಲ್ಲಿ ಗಣೇಶೋತ್ಸವ ಸಂಭ್ರಮ

ಗಮನ ಸೆಳೆಯುತ್ತಿವೆ ಆಕರ್ಷಕ ಗಣೇಶ ಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 15:19 IST
Last Updated 2 ಸೆಪ್ಟೆಂಬರ್ 2022, 15:19 IST
ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಸಪ್ತ ಸಾಮ್ರಾಟ ಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ -ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಸಪ್ತ ಸಾಮ್ರಾಟ ಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ -ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನಗರದ ವಿವಿಧ ಬಡಾವಣೆಗಳು ಹಾಗೂ ಓಣಿಗಳಲ್ಲಿ ಪ್ರತಿಷ್ಠಾಪಿಸಿರುವ ಆಕರ್ಷಕ ಸಾರ್ವಜನಿಕ ಗಣೇಶ ಮೂರ್ತಿಗಳು ಜನರ ಗಮನ ಸೆಳೆಯುತ್ತಿವೆ. ಗಜಾನನ ಮಹಾಮಂಡಳಿಗಳು ಪ್ರತಿಷ್ಠಾಪಿಸಿರುವ ಅಶ್ವಾರೂಢ, ತಿರುಪತಿಯ ತಿರುಮಲ, ಬೆಳ್ಳಿ ಗಣೇಶ... ಹೀಗೆ ವಿವಿಧ ಮಾದರಿಯ ಗಣೇಶ ಮೂರ್ತಿಗಳು ಭಕ್ತರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ.

ಪೆಂಡಾಲ್‌ಗಳಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆಗಳು ಜರುಗಿದವು. ಮಧ್ಯಾಹ್ನ ಮತ್ತು ರಾತ್ರಿ ಭಕ್ತರಿಗೆ ಕೆಲ ಮಹಾಮಂಡಳಿಗಳಿಂದ ಪ್ರಸಾದ ವಿತರಣೆ ಮಾಡಲಾಯಿತು. ಭಕ್ತರು ಸರದಿಯಲ್ಲಿ ಬಂದು ಮೂರ್ತಿಗಳ ದರ್ಶನ ಪಡೆದರು. ಕೆಲ ಮಹಾಮಂಡಳಿಗಳು ನೃತ್ಯ, ಗಾಯನ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

ಕೆಲ ಮಹಾಮಂಡಳಿಗಳು ನಿರ್ಮಿಸಿರುವ ಪೆಂಡಾಲ್‌ಗಳು ಅತ್ಯಾಕರ್ಷಕವಾಗಿವೆ. ದುರ್ಗದ ಬೈಲ್‌ನಲ್ಲಿ ಅಯೋಧ್ಯೆ ದೇವಸ್ಥಾನ ಮಾದರಿ, ಸ್ಟೇಷನ್ ರಸ್ತೆಯಲ್ಲಿ ಧರ್ಮಸ್ಥಳದ ಮಂಜುನಾಥ ದೇವಸ್ಥಾನದಂತೆ, ಮೇದಾರ ಓಣಿಯಲ್ಲಿ ಕೈಲಾಸ ಶಿವ, ಕೊಯಿನ್ ರಸ್ತೆಯಲ್ಲಿ ಕೆಂಪು ಕೋಟೆ ಹಿನ್ನೆಲೆಯ ಪೆಂಡಾಲ್‌ ಗಮನ ಸೆಳೆಯುತ್ತಿವೆ.

ADVERTISEMENT

ದಾಜಿಬಾನಪೇಟೆಯ 25 ಅಡಿ ಎತ್ತರದ ಮೂರ್ತಿ ಹಾಗೂ ಮರಾಠ ಗಲ್ಲಿಯ 22 ಅಡಿ ಎತ್ತರದ ಮೂರ್ತಿ, ನಗರದಲ್ಲಿ ಪ್ರತಿಷ್ಠಾಪಿಸಿರುವ ಅತಿ ಎತ್ತರದ ಗಣೇಶ ಮೂರ್ತಿಗಳಾಗಿವೆ. ಇಲ್ಲಿಗೆ ಭಕ್ತರು ಹರಿವು ಕೂಡ ಹೆಚ್ಚಾಗಿದೆ.

ವಿದ್ಯಾನಗರದ ಹಳೇ ಆದಾಯ ತೆರಿಗೆ ಇಲಾಖೆಯ ಕಚೇರಿ ಬಳಿ ವರಸಿದ್ಧಿ ವಿನಾಯಕ ಯುವಕ ಮಂಡಳಿ ವತಿಯಿಂದ ಮಹಿಳೆಯರಿಗೆ ರಂಗೋಲಿ ಸ್ಫರ್ಧೆ ನಡೆಯಿತು. ಬೇರೆ ಮಹಾಮಂಡಳಗಳು ಸಹ ಸ್ಥಳೀಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.