ಹುಬ್ಬಳ್ಳಿಯ ವಿದ್ಯಾನಗರದ ತಿಮ್ಮಸಾಗರ ರಸ್ತೆಯಲ್ಲಿ ಸಂಗ್ರಹವಾಗಿರುವ ಕಸ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ: ಅವಳಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಮಹಾನಗರ ಪಾಲಿಕೆ ದಂಡಾಸ್ತ್ರ ಪ್ರಯೋಗಿಸುತ್ತಿದೆ. ಆದರೆ, ರಸ್ತೆ ಬದಿ ಕಸ ಎಸೆಯುವುದಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ.
ನಗರದ ಪ್ರಮುಖ ರಸ್ತೆಗಳ ಬದಿ, ಖಾಲಿ ನಿವೇಶನ, ಬಸ್ ನಿಲ್ದಾಣ, ರೈಲು ನಿಲ್ದಾಣ ಬಳಿ ಸೇರಿದಂತೆ ಹಲವೆಡೆ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಇದರಿಂದ ನಗರದ ಅಂದ ಹಾಳಾಗುತ್ತಿದೆ ಎಂಬುದು ಸಾರ್ವಜನಿಕರ ದೂರು.
ಕಂಡ ಕಂಡ ಕಡೆ ಕಸ ಎಸೆಯುವುದನ್ನು ತಡೆಯಲು ಮಹಾನಗರ ಪಾಲಿಕೆಯು ‘ವಿಕ್ರಂ’ ಹೆಸರಿನಲ್ಲಿ ಎರಡು ತಂಡಗಳನ್ನು ಸಹ ರಚಿಸಿದೆ. ಈ ತಂಡಗಳು ಪ್ರತಿ ದಿನ ಅವಳಿ ನಗರದಲ್ಲಿ ಸಂಚರಿಸಿ ಕಸ ಎಸೆಯುವವರ ಮೇಲೆ ನಿಗಾ ವಹಿಸುತ್ತಿದ್ದು, ಸ್ಥಳದಲ್ಲೇ ದಂಡ ವಿಧಿಸುತ್ತಿದೆ.
ಎಲ್ಲೆಂದರಲ್ಲಿ ಸುರಿದಿದ್ದಕ್ಕೆ ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ನ.25ರವರೆಗೆ ₹84 ಸಾವಿರ ದಂಡ ವಿಧಿಸಲಾಗಿದೆ. ಕಟ್ಟಡ ತ್ಯಾಜ್ಯ ಎಸೆದಿದ್ದಕ್ಕೆ ₹11 ಸಾವಿರ ಮತ್ತು ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಮಾರಾಟಕ್ಕೆ ಸಂಬಂಧಿಸಿದಂತೆ ₹3.05 ಲಕ್ಷ ದಂಡ ವಿಧಿಸಿ, 18.45 ಟನ್ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.
ರಸ್ತೆ ಬದಿ ಕಸ ಹಾಕುವುದನ್ನು ನಿಯಂತ್ರಿಸಲು ಮಹಾನಗರ ಪಾಲಿಕೆ ದಂಡ ವಿಧಿಸುತ್ತಿರುವುದು ಸ್ವಾಗತಾರ್ಹ. ಆದರೆ, ಮನೆ ಮನೆಯಿಂದ ಕಸ ಸಂಗ್ರಹ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಅದನ್ನು ಸರಿಪಡಿಸದೆ ದಂಡ ವಿಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.
‘ಕಸ ಸಂಗ್ರಹಿಸುವ ವಾಹನಗಳು ಮನೆ ಬಳಿ ಬಂದಾಗ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಕೊಡಬೇಕು. ವಾಣಿಜ್ಯ ಸಂಕೀರ್ಣದವರಿಗೆ ದಂಡ ಹಾಕಿದರೂ ಹೊರಗೆ ಕಸ ಚೆಲ್ಲುವುದನ್ನು ಪುನರಾವರ್ತಿಸಿದರೆ ವ್ಯಾಪಾರ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಎಚ್ಚರಿಸಿದರು.
‘ವಾಣಿಜ್ಯ ಮಳಿಗೆಗಳ ಮಾಲೀಕರು, ವ್ಯಾಪಾರಿಗಳ ಸಭೆ ಕರೆದು ರಸ್ತೆ ಬದಿ ಕಸ ಹಾಕದಂತೆ ಎಚ್ಚರಿಕೆ ನೀಡಲಾಗಿದೆ. ವಿವಿಧೆಡೆ 50ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಸ ಎಸೆದ ಸ್ಥಳವನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಲಾಗಿದೆ’ ಎಂದರು.
‘ಮನೆ ಮನೆಯಿಂದ ಕಸ ಸಂಗ್ರಹಕ್ಕೆ ಪಾಲಿಕೆಯಲ್ಲಿ ಸದ್ಯ 260 ವಾಹನಗಳು ಇವೆ. ಅದರ ಜತೆಗೆ ಈಗಾಗಲೇ 70 ವಾಹನಗಳನ್ನು ಖರೀದಿಗೆ ಕಾರ್ಯಾದೇಶ ನೀಡಲಾಗಿದೆ. ಇನ್ನು ಮುಂದೆ ಇನ್ನೂ ಪರಿಣಾಮಕಾರಿಯಾಗಿ ಕಸ ಸಂಗ್ರಹ ಕಾರ್ಯ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಕಸ ಸಂಗ್ರಹಕ್ಕೆ ವಾಹನಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಮನೆಯಲ್ಲಿ ಕಸ ಇಟ್ಟುಕೊಂಡರೆ ವಾಸನೆ ಬರುತ್ತದೆ. ಇದರಿಂದ ಅನಿವಾರ್ಯವಾಗಿ ಜನರು ಹೊರಗೆ ಚೆಲ್ಲುತ್ತಾರೆ. ದಂಡ ಹಾಕುವ ಜತೆಗೆ ಪಾಲಿಕೆಯ ವಾಹನಗಳು ಸರಿಯಾದ ಸಮಯಕ್ಕೆ ಕಸ ಸಂಗ್ರಹಕ್ಕೆ ಬರುವಂತೆ ಮಾಡಬೇಕು. ವಾಹನಗಳ ಸಂಖ್ಯೆಯನ್ನು ಹೆಚ್ಚಿಸಬೇಕು’ ಎಂಬುದು ಗೋಕುಲ ರಸ್ತೆ ನಿವಾಸಿ ರೇವಣಸಿದ್ದಪ್ಪ ಅವರ ಒತ್ತಾಯ.
ಕಸವನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು ₹95 ಲಕ್ಷ ವೆಚ್ಚದಲ್ಲಿ ಎರಡು ‘ಜಟಾಯು’ ಹೆಸರಿನ ವ್ಯಾಕ್ಯೂಂ ಗಾರ್ಬೇಬ್ ಸಕ್ಷನ್ ಯಂತ್ರಗಳನ್ನು ಖರೀದಿಸಿದ್ದು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು. ಮಾರುಕಟ್ಟೆ ಪ್ರದೇಶ ಸ್ವಚ್ಛತೆ ಇಲ್ಲದ ಪ್ರಮುಖ ಪ್ರದೇಶಗಳು ಪ್ರಮುಖ ರಸ್ತೆಗಳು ಬ್ಲಾಕ್ ಸ್ಪಾಟ್‌ಗಳಲ್ಲಿ ಈ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಬೆಳಗಿನ ಅವಧಿಯಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ.
ನಂತರದ ಅವಧಿಯಲ್ಲಿ ಈ ಯಂತ್ರಗಳ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ ಎಂದರು. ಯಂತ್ರಕ್ಕೆ ಅಳವಡಿಸಿರುವ 8–10 ಇಂಚು ಅಗಲದ ಪೈಪ್ ಕಸವನ್ನು ಹೀರಿಕೊಳ್ಳುತ್ತದೆ. 2 ಟನ್ ಕಸ ಸಂಗ್ರಹಿಸುವ ಸಾಮರ್ಥವ್ಯವನ್ನು ಈ ಯಂತ್ರ ಹೊಂದಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಡಿ (ಎನ್‌ಕ್ಯಾಪ್) ಮಹಾನಗರ ಪಾಲಿಕೆಗೆ ಕಳೆದ ವರ್ಷ ₹10 ಕೋಟಿ ಅನುದಾನ ಬಂದಿತ್ತು. ಅದರಲ್ಲಿ ಈ ಯಂತ್ರಗಳನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮೂರು ಯಂತ್ರಗಳನ್ನು ಖರೀದಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.