ADVERTISEMENT

ಬ್ಯಾಂಕ್ ಸುರಕ್ಷತೆಗೆ ಒತ್ತು ನೀಡಿ- ಪೊಲೀಸ್ ಕಮಿಷನರ್ ಲಾಭೂ ರಾಮ್ ಸೂಚನೆ

ಭದ್ರತಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 13:23 IST
Last Updated 21 ಜನವರಿ 2022, 13:23 IST
ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಲಾಭೂ ರಾಮ್ ಶುಕ್ರವಾರ ನಡೆಸಿದ ಜಿಲ್ಲಾ ಮಟ್ಟದ ಭದ್ರತಾ ಸಮಿತಿಯ ವರ್ಚುವಲ್ ಸಭೆಯಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರು ಪಾಲ್ಗೊಂಡರು
ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಲಾಭೂ ರಾಮ್ ಶುಕ್ರವಾರ ನಡೆಸಿದ ಜಿಲ್ಲಾ ಮಟ್ಟದ ಭದ್ರತಾ ಸಮಿತಿಯ ವರ್ಚುವಲ್ ಸಭೆಯಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರು ಪಾಲ್ಗೊಂಡರು   

ಹುಬ್ಬಳ್ಳಿ: ‘ಸುರಕ್ಷತೆಯ ದೃಷ್ಟಿಯಿಂದ ಬ್ಯಾಂಕ್‌ ಮತ್ತು ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಗ್ರಾಹಕರು ಹಾಗೂ ಸಿಬ್ಬಂದಿ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಜೊತೆಗೆ, ತುರ್ತು ಸಂದರ್ಭದ ನಿರ್ವಹಣೆಗಾಗಿ ಅಲಾರಾಂ ವ್ಯವಸ್ಥೆ ಅಥವಾ ಪ್ಯಾನಿಕ್ ಸ್ವಿಚ್‌ಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಪೊಲೀಸ್ ಕಮಿಷನರ್ ಲಾಭೂ ರಾಮ್ ಸೂಚನೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಭದ್ರತಾ ಸಮಿತಿಯ ವರ್ಚುವಲ್ಸಭೆಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ಬ್ಯಾಂಕ್‌ನಲ್ಲಿ ಇತ್ತೀಚೆಗೆ ನಡೆದ ಬ್ಯಾಂಕ್ ದರೋಡೆ ಪ್ರಕರಣವು, ಸಿಬ್ಬಂದಿ ಹಾಗೂ ಗ್ರಾಹಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಇತ್ತೀಚೆಗೆ ಆನ್‌ಲೈನ್‌ ಬ್ಯಾಂಕಿಂಗ್ ವ್ಯಾಪಕವಾಗಿದೆ. ದುಷ್ಕರ್ಮಿಗಳು ಗ್ರಾಹಕರಿಗೆ ವಿವಿಧ ರೂಪದಲ್ಲಿ ಕರೆ ಮಾಡಿ ಗ್ರಾಹಕರನ್ನು ನಂಬಿಸಿ, ಅಕ್ರಮವಾಗಿ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸೈಬರ್ ಅಪರಾಧಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜನ ಮೋಸ ಹೋಗುತ್ತಿದ್ದಾರೆ. ಅಪರಿಚಿತರು ಮೊಬೈಲ್‌ಗೆ ಕರೆ ಮಾಡಿ ಬ್ಯಾಂಕ್ ಖಾತೆಯ ಮಾಹಿತಿ, ಎಟಿಎಂ ಸಂಖ್ಯೆ, ಒಟಿಪಿ ಸೇರಿದಂತೆ ಯಾವುದೇ ವಿವರಗಳನ್ನು ಕೇಳಿದರೆ ಕೊಡಬಾರದು’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್ ಮಾತನಾಡಿ, ‘ಆನ್‌ಲೈನ್ ಅಥವಾ ನೇರ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಆರ್‌ಬಿಐ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಭೂ ದಾಖಲೆ ಕುರಿತು ವ್ಯವಹರಿಸುವಾಗಲೂ ಜಾಗ್ರತೆ ವಹಿಸಬೇಕು’ ಎಂದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ, ಬ್ಯಾಂಕ್‌ಗಳ ಪ್ರಾದೇಶಿಕ ಭದ್ರತಾ ಅಧಿಕಾರಿಗಳು, ಜಿಲ್ಲಾ ಸಂಯೋಜಕರು ಮತ್ತು ಕರೆನ್ಸಿ ಚೆಸ್ಟ್ ಮೇಲ್ವಿಚಾರಕರು ಸಭೆಯಲ್ಲಿ ಭಾಗವಹಿಸಿದ್ದರು.

ಗಸ್ತು ಹೆಚ್ಚಳಕ್ಕೆ ಮನವಿ

ಸಭೆಯಲ್ಲಿ ಮಾತನಾಡಿದ ಬ್ಯಾಂಕ್‌ ಅಧಿಕಾರಿಗಳು, ಬ್ಯಾಂಕ್‌ಗಳು ಇರುವ, ಕಳ್ಳತನ ಹೆಚ್ಚಾಗಿ ನಡೆಯುವ ಪ್ರದೇಶಗಳಲ್ಲಿ ಹಾಗೂ ವಾರಾಂತ್ಯದಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಬೇಕು ಎಂದು ಕಮಿಷನರ್‌ಗೆ ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್, ‘ಬ್ಯಾಂಕ್‌ಗಳ ಬೇಕಾದ ಭದ್ರತೆ ಜೊತೆಗೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಸಹಕಾರ ನೀಡಲಾಗುವುದು. ಸುರಕ್ಷತಾ ದೃಷ್ಟಿಯಿಂದ ಶಾಖೆಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಬ್ಯಾಂಕ್‌ಗಳ ಪ್ರಾದೇಶಿಕ ಭದ್ರತಾ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.