ನವಲಗುಂದ: ಗೋವಾ-ತಮ್ನಾರ್ ವಿದ್ಯುತ್ ಯೋಜನೆಯನ್ನು ತಡೆಹಿಡಿದು ಮರು ಪರಿಶೀಲಿಸಬೇಕು ಎಂದು ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು, ಶಾಸಕ ಎನ್.ಎಚ್.ಕೋನರಡ್ಡಿ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಒತ್ತಾಯಿಸಿದರು.
ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಅರಣ್ಯ ಹಾಗೂ ಪರಿಸರ ಇಲಾಖೆಯು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಇಲ್ಲಿಯವರೆಗೂ ಅನುಮೋದನೆ ನೀಡುತ್ತಿಲ್ಲ.
ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದೀರಿ. ವನ್ಯಜೀವಿ ಮಂಡಳಿಯ ಅನುಮತಿ ಅವಶ್ಯವಿದ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಮಲಪ್ರಭಾ ಬಲದಂಡೆ ಕಾಲುವೆ ಆಧುನೀಕರಣ ಬಾಕಿ ಇರುವ ಕಾಮಗಾರಿ ಪ್ರಾರಂಭಿಸಿ ಕೊನೆಯ ಅಂಚಿನ ರೈತರ ಜಮೀನುಗಳಿಗೆ ನೀರು ಒದಗಿಸಬೇಕು. ನಿರಂತರ ಮಳೆಯಿಂದಾಗಿ ಬೆಳೆ ಹಾಳಾಗಿದ್ದು, ಬೆಳೆ ಪರಿಹಾರ ನೀಡಬೇಕು. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆಯಿಂದ ರೈತರಿಗೆ ಪರಿಹಾರ ನೀಡಬೇಕೆಂದು ರೈತರ ಪರವಾಗಿ ಶಾಸಕ ಎನ್.ಎಚ್. ಕೋನರಡ್ಡಿ ಅವರು, ಮುಖ್ಯಮಂತ್ರಿಗೆ ಮನವಿ ಮಾಡಿದರು.
ಮಹದಾಯಿ ರೈತ ಹೋರಾಟಾರರಾದ ಲೋಕನಾಥ ಹೆಬಸೂರ, ಸಿದ್ದು ತೇಜಿ, ವಿರೇಶ ಸೊಬರದಮಠ, ರಘುನಾಥ ನಡುವಿನಮನಿ, ಫಕ್ಕೀರಗೌಡ ವೆಂಕನಗೌಡ್ರ, ರವಿ ಕಂಬಳಿ, ಗೌಡಪ್ಪಗೌಡ ದೊಡ್ಡಮನಿ, ಬಸಣ್ಣ ಓಲೇಕಾರ, ತಿಪ್ಪಣ್ಣ ಸಾಲಿ, ನಾಗೇಶ ತುಳಸಿಗೆರಿ, ಶಿವಾನಂದ ಮಠಪತಿ, ಸಿದ್ದಪ್ಪ ಪೂಜಾರ, ವೀರಣ್ಣ ಹಿರೇಮಠ, ಶಿವಾನಂದ ಚಿಕ್ಕನರಗುಂದ, ದೇವಪ್ಪ ಗುಡಿಸಾಗರ, ಬಾಷೇಸಾಬ ಅನ್ಸಾರಿ, ರವಿ ವಡ್ಡರ, ಮಂಜುನಾಥ ಸಂಗಣ್ಣವರ, ನಿಂಗಪ್ಪ ಬಡಿಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.