ಅಮ್ಮಿನಬಾವಿ (ಉಪ್ಪಿನಬೆಟಗೇರಿ): ಗುಡುಗು, ಸಿಡ್ಲು, ಮಿಂಚು, ಮಳಿ ಭಾಳ ಐತ್ರಿಪೋ ಭಾಳ... ಮಳಿ-ಬೆಳಿ ಸಂಪೈತ್ರಿಪೋ... ಹುಟ್ಟಿದ ಮಗುವಿಗೆ ಒಣಾ ರೋಗ ಐತ್ರಿಪೋ... ಭೂಮ್ಯಾಗ ಈ ವರ್ಷ ಕಾಳ್ರಿಪೋ ಕಾಳು...
ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಗುಡಿ ಓಣಿಯ ಪ್ಯಾಟಿ ಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ರಥೋತ್ಸವದ ಕೊನೆಯಲ್ಲಿ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ವರ್ಷದ ಆಗು–ಹೋಗುಗಳ ಕುರಿತು ನುಡಿದ ಕಾರಣಿಕ ಇದು.
‘ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ. ತಾವು ಬೆಳೆಯುವ ಬೆಳೆಗಳಿಗೆ ಅಧಿಕ ಇಳುವರಿ ಪ್ರಾಪ್ತವಾಗುತ್ತದೆ’ ಎಂದು ಕಾರಣಿಕ ವಿಶ್ಲೇಷಿಸಲಾಗಿದೆ.
ಈರಯ್ಯ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ರಥೋತ್ಸವದಲ್ಲಿ ಮರೇವಾಡ ಹಾಗೂ ಅಮ್ಮಿನಬಾವಿ ಬಸವಣ್ಣ ದೇವರ ನಂದಿಕೋಲು, ಪಲ್ಲಕ್ಕಿ, ಕರಡಿ ಮಜಲು ಇದ್ದವು. ಭಕ್ತರು ತೇರಿಗೆ ಉತ್ತುತ್ತೆ ಮತ್ತು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಬಸವಣ್ಣ (ನಂದೀಶ್ವರ) ದೇವರ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಜರುಗಿದವು. ನಂತರ ಅನ್ನಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.