ಹುಬ್ಬಳ್ಳಿ: ‘ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಯಾರ ಶಕ್ತಿ ಪ್ರದರ್ಶನದ ವೇದಿಕೆಯಲ್ಲ. ಅದು ಸರ್ಕಾರದ ಸಾಧನೆಯನ್ನು ಜನತೆಗೆ ತಿಳಿಸುವ ಸಮಾವೇಶ’ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ನಾಡಿನಾದ್ಯಂತ ಅವರಿಗೆ ಜನಪ್ರಿಯತೆ ಇದೆ. ಅವರ ಶಕ್ತಿ ಏನೆಂಬುದು ಪಕ್ಷದ ಹೈಕಮಾಂಡ್‌ಗೂ ಗೊತ್ತಿದೆ. ಆದರೆ, ಅವರ ವರ್ಚಸ್ಸು ಕಂಡು ವಿರೋಧ ಪಕ್ಷದವರಿಗೆ ಭಯ ಶುರುವಾಗಿದೆ. ಅದಕ್ಕಾಗಿ ಸಿಎಂ ಬದಲಾವಣೆ ಹಿನ್ನೆಲೆಯಲ್ಲಿ ಶಕ್ತಿಪ್ರದರ್ಶನದ ಸಮಾವೇಶ ಎಂದು ಬಿಂಬಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಪ್ರತಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಅನುದಾನ ಮೀಸಲು ವಿಚಾರಕ್ಕೂ, ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ್ ಅವರು ರಾಜ್ಯಕ್ಕೆ ಬಂದು ಹೋಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಅನುದಾನ ಮೀಸಲು ಕುರಿತು ಈ ಹಿಂದೆಯೇ ನಿರ್ಧರಿಸಲಾಗಿತ್ತು’ ಎಂದರು.
‘ಪಕ್ಷದ ಹೈಕಮಾಂಡ್ ಹೇಳಿದ ಹಾಗೆ ಎಲ್ಲರೂ ನಡೆದುಕೊಳ್ಳಬೇಕು. ಹೈಕಮಾಂಡ್ ಸೂಚನೆಯಂತೆ ಸುರ್ಜೇವಾಲ್ ಶಾಸಕರ ಸಭೆ ನಡೆಸಿ, ಅಭಿವೃದ್ಧಿ ವಿಚಾರವಾಗಿ ಚರ್ಚಿಸಿರಬಹುದು. ಸಚಿವರ ವಿರುದ್ಧ ಶಾಸಕರು ಅವರಿಗೆ ದೂರು ನೀಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ನನ್ನನ್ನಂತೂ ಸಭೆಗೆ ಕರೆದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.