ADVERTISEMENT

ಸರ್ಕಾರದ ವೈಫಲ್ಯ; ಜನ ಅಸಹಾಯಕ

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:01 IST
Last Updated 2 ಜೂನ್ 2020, 16:01 IST

ಹುಬ್ಬಳ್ಳಿ: ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದಿಂದ ಜನ ಅಸಹಾಯಕ ಸ್ಥಿತಿ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಅಸಾಧಾರಣ ಭರವಸೆಗಳು ಮತ್ತು ಮೂಡಿಸಿದ್ದ ನಿರೀಕ್ಷೆಗಳು ಹುಸಿಯಾಗಿವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಟೀಕಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಹೃದಯಹೀನರಂತೆ ನಡೆದುಕೊಂಡ ಬಿಜೆಪಿ ಸರ್ಕಾರ ಜನಸಾಮಾನ್ಯರ ಸಣ್ಣ ಬೇಡಿಕೆಗಳನ್ನೂ ಈಡೇರಿಸಲಾಗದ ಹಂತಕ್ಕೆ ತಲುಪಿದೆ. ಕೋವಿಡ್‌ 19 ಸಮಯದಲ್ಲಿ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ. ಆರ್ಥಿಕ ವೃದ್ಧಿ ದರ (ಜಿಡಿಪಿ) ತೀವ್ರವಾಗಿ ಕುಸಿದಿದ್ದು ಮೋದಿ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ’ ಎಂದು ವ್ಯಂಗವಾಡಿದರು.

‘ದೇಶದಲ್ಲಿ ಕೊರೊನಾ ಆರಂಭವಾಗುವುದಕ್ಕೂ ಮೊದಲೇ ಜಿಡಿಪಿ ಕುಸಿದಿತ್ತು. ಹಿಂದಿನ 21 ತಿಂಗಳಿಂದ ನಿರಂತರವಾಗಿ ಕುಸಿಯುತ್ತಲೇ ಸಾಗಿದೆ. ಮೋದಿ ಸರ್ಕಾರ 2014ರಿಂದ 2019ರ ಸೆಪ್ಟೆಂಬರ್‌ ಅವಧಿಯಲ್ಲಿ ₹6.66 ಲಕ್ಷ ಕೋಟಿಯನ್ನು ವಸೂಲಾಗದ ಸಾಲ ಎಂದು ಪರಿಗಣಿಸಿದ್ದರಿಂದ ಬ್ಯಾಂಕ್‌ಗಳು ಕೂಡ ವಂಚನೆಗೆ ಒಳಗಾಗಿವೆ. ಆರು ವರ್ಷಗಳ ಅವಧಿಯಲ್ಲಿ ಭಾರತ, ಏಷ್ಯಾ ಖಂಡದಲ್ಲಿ ಅತ್ಯಂತ ಕೆಟ್ಟ ಪ್ರಮಾಣದಲ್ಲಿ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡಿದೆ’ ಎಂದು ಹೇಳಿದರು.

ADVERTISEMENT

‘ಕೋವಿಡ್‌ 19ನಿಂದ ಆರ್ಥಿಕ ರಂಗಕ್ಕೆ ಚೇತರಿಕೆ ನೀಡಲು ಘೋಷಿಸಿದ ₹20 ಲಕ್ಷ ಕೋಟಿ ನೆರವಿನಿಂದ ದೇಶದ ಜಿಡಿಪಿ ಶೇ 10ಕ್ಕೆ ಹೆಚ್ಚಳವಾಗುತ್ತದೆ ಎಂದು ಮೋದಿ ಹೇಳಿದ್ದು, ಈಗ ಶೇ 0.83ರಷ್ಟು ಮಾತ್ರ ಇದೆ. ಉದ್ಯೋಗ ಸೃಷ್ಟಿ, ಕಪ್ಪುಹಣ ವಾಪಸ್‌ ಎಲ್ಲವೂ ಕೇವಲ ಮಾತಿಗಷ್ಟೇ ಸೀಮಿತವಾಗಿವೆ. ರೈತರು, ಕಾರ್ಮಿಕರು, ನಿರುದ್ಯೋಗಿ ಯುವಜನತೆ ಮತ್ತು ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದೇ ಇರುವುದೇ ಈ ಸರ್ಕಾರದ ಸಾಧನೆ’ ಎಂದು ಟೀಕಿಸಿದರು.

’ಸಬ್ ಕಾ ಸಾತ್‌, ಸಬ್ ಕಾ ವಿಕಾಸ’ ಎಂದು ಹೇಳಿದ್ದ ಮೋದಿ ’ಮಿತ್ರೊಂಕೆ ಸಾತ್‌ ಭಾಜಪ ಕಾ ವಿಕಾಸ್’ ಎನ್ನುವಂತೆ ಮಾಡಿದ್ದಾರೆ ಎಂದು ನೀರಲಕೇರಿ ಬೇಸರ ವ್ಯಕ್ತಪಡಿಸಿದರು. ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅನಿಲ ಕುಮಾರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.