ADVERTISEMENT

ಮಹಿಳೆ ವಿವಸ್ತ್ರ ಪ್ರಕರಣ; ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಬಿಜೆಪಿ, ಸುಜಾತಾ ಹಂಡಿ ಹಲ್ಲೆ ನಡೆಸಿದ ವಿಡಿಯೊ ಬಿಡುಗಡೆ ಮಾಡಿದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 21:26 IST
Last Updated 9 ಜನವರಿ 2026, 21:26 IST
<div class="paragraphs"><p>ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬಿಜೆಪಿ ನಾಯಕರು ಸುಜಾತಾ ಹಂಡಿ ಕುಟುಂಬದವರ ಜೊತೆ ಸಮಾಲೊಚನೆ ನಡೆಸಿದರು. </p></div>

ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬಿಜೆಪಿ ನಾಯಕರು ಸುಜಾತಾ ಹಂಡಿ ಕುಟುಂಬದವರ ಜೊತೆ ಸಮಾಲೊಚನೆ ನಡೆಸಿದರು.

   

ಹುಬ್ಬಳ್ಳಿ: ಇಲ್ಲಿನ ಚಾಲುಕ್ಯ ನಗರದಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ನಗರದ ಡಾ. ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಕುಮ್ಮಕ್ಕಿನಿಂದ ಪೊಲೀಸರು ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿದ್ದಾರೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ವಿರುದ್ಧ ಹರಿಹಾಯ್ದರು. 

ADVERTISEMENT

‘ಸುಜಾತಾ ಅವರನ್ನು ಬಂಧಿಸುವ ಸಂದರ್ಭ ವ್ಯಾನ್‌ ಮತ್ತು ಸಿಬ್ಬಂದಿ ನಿಮ್ಮದೇ ಆಗಿದ್ದಾಗಲೂ, ಅವರೇ ವಿವಸ್ತ್ರವಾಗುತ್ತಾರೆ ಎಂದಾದರೆ ನೀವು ಕಡಲೆಕಾಯಿ ತಿನ್ನುತ್ತಿದ್ದೀರ? ಪಾಲಿಕೆ ಸದಸ್ಯೆ ಪ್ರಕರಣ ದಾಖಲಿಸಿದ ತಕ್ಷಣ ಸುಜಾತಾ ಅವರನ್ನು ಬಂಧಿಸುತ್ತೀರಿ ಎಂದಾದರೆ, ಸುಜಾತಾ ಅವರು ಪ್ರಕರಣ ದಾಖಲಿಸಿದಾಗ, ಪಾಲಿಕೆ ಸದಸ್ಯೆಯನ್ನು ಬಂಧಿಸಲು ಯಾಕೆ ಮೀನಮೇಷ ಮಾಡಿದ್ದು’ ಎಂದು ಆರ್‌.ಅಶೋಕ ಪ್ರಶ್ನಿಸಿದರು.

‘ಹಳ್ಳಿಯಿಂದ ದಿಲ್ಲಿವರೆಗೂ ಕಾಂಗ್ರೆಸ್‌ ಮುಖಂಡರ ಬಳಿ ಸಿಡಿ ಫ್ಯಾಕ್ಟರಿಗಳೇ ಇವೆ. ಅವರ ಬಳಿ ಪಾಲಿಕೆಯ ಕಾಂಗ್ರೆಸ್‌ ಸದಸ್ಯೆ ಸುವರ್ಣಾ ಕಲಕುಂಟ್ಲ ಅವರ ವಿಡಿಯೋಗಳು ಸಹ ಇರಬಹುದು. ಅದನ್ನು ಬಿಡುಗಡೆ ಮಾಡಲಿ. ಕಾನೂನು ಎಲ್ಲರಿಗೂ ಒಂದೇ. ತಾರ್ಕಿಕ ಅಂತ್ಯ ಸಿಗುವವರೆಗೆ ಹೋರಾಡುತ್ತೇವೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ತಿಪ್ಪಣ್ಣ ಮಜ್ಜಗಿ, ಸೀಮಾ ಮಸೂತಿ, ಶಿವು ಮೆಣಸಿನಕಾಯಿ, ಮಹೇಂದ್ರ ಕೌತಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

‘ಶಾಸಕ ಟೆಂಗಿನಕಾಯಿಗೆ ಅಭದ್ರತೆ’: ‘ಅಪರಾಧ ಪ್ರಕರಣಗಳ ಹಿನ್ನೆಲೆಯಿದ್ದ ಮಹಿಳೆ ಹಾಗೂ ರೌಡಿಗಳನ್ನು ಮುಂದಿಟ್ಟುಕೊಂಡು ಶಾಸಕ ಮಹೇಶ ಟೆಂಗಿನಕಾಯಿ ಅವರು ಹುಬ್ಬಳ್ಳಿಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ.‌ ಅವರ ಗುರು ಜಗದೀಶ ಶೆಟ್ಟರ್ ಮರಳಿ ಕ್ಷೇತ್ರ ಪಡೆಯಬೇಕು ಎನ್ನುವ ಹಠದಲ್ಲಿದ್ದಾರೆ. ಮತ್ತೊಬ್ಬ ನಾಯಕರು ಸಹ ಆ ಕ್ಷೇತ್ರದ ಮೇಲೆ ಕಣ್ಣಿಟ್ಟು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ತಮ್ಮ ನೆಲೆ ಗಟ್ಟಿ ಮಾಡಿಕೊಳ್ಳಲು ಸೆಂಟ್ರಲ್ ಕ್ಷೇತ್ರದಲ್ಲಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ ಆರೋಪಿಸಿದರು.

ಸಿಐಡಿ ತಂಡ ಇಂದು ನಗರಕ್ಕೆ: ಕೇಶ್ವಾಪುರ ಠಾಣೆಯಲ್ಲಿ ದಾಖಲಾದ ಗಲಭೆ ಪ್ರಕರಣಗಳ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಸಿಐಡಿ ಅಧಿಕಾರಿಗಳು ಶನಿವಾರ ನಗರಕ್ಕೆ ಬರಲಿದ್ದಾರೆ.

‘ಐಪಿಎಸ್‌ ದರ್ಜೆಯ ಅಧಿಕಾರಿಯ ನೇತೃತ್ವದ ತಂಡ ನಗರಕ್ಕೆ ಬರಲಿದ್ದು, ಅವರಿಗೆ ಪ್ರಕರಣಗಳ ಕಡತಗಳನ್ನು ಹಸ್ತಾಂತರಿಸಲಾಗುವುದು. ಸ್ಥಳೀಯ ಪೊಲೀಸರು ಅವರಿಗೆ ತನಿಖೆಗೆ ಸಹಕರಿಸಲಿದ್ದಾರೆ’ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.