ADVERTISEMENT

ಆಟೊ, ಟ್ಯಾಕ್ಸಿ ಚಾಲಕರಿಗೆ ₹5 ಸಾವಿರ: ಅರ್ಧದಷ್ಟು ಮಂದಿಗೂ ಸಿಕ್ಕಿಲ್ಲ ಪರಿಹಾರ

ತೊಡಕಾದ ಕಠಿಣ ಷರತ್ತುಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 5:23 IST
Last Updated 22 ಜುಲೈ 2020, 5:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ₹5 ಸಾವಿರ ನೆರವು ಎರಡು ತಿಂಗಳಾದರೂ ಅರ್ಧದಷ್ಟು ಮಂದಿಗೂ ಸಿಕ್ಕಿಲ್ಲ. ನೆರವು ಕೋರಿ ಬಂದಿರುವ 2.46 ಲಕ್ಷ ಅರ್ಜಿಗಳ ಪೈಕಿ ಇದುವರೆಗೆ 1.20 ಲಕ್ಷ ಮಂದಿಗಷ್ಟೇ ಹಣ ಪಾವತಿಯಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮೇ ತಿಂಗಳ ಮೊದಲ ವಾರದಲ್ಲಿ ಚಾಲಕರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ರಾಜ್ಯದಾದ್ಯಂತ ಸುಮಾರು 7.75 ಲಕ್ಷ ಆಟೊ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿತ್ತು.

16 ಸಾವಿರ ಬಾಕಿ‌: ‘ಚಾಲಕರ ಬ್ಯಾಂಕ್‌ ಖಾತೆಗೆ ತಲಾ ₹5 ಸಾವಿರದಂತೆ ಇದುವರೆಗೆ ₹60 ಕೋಟಿ ಪಾವತಿಸಲಾಗಿದೆ. ಒಟ್ಟು ಅರ್ಜಿಗಳ ಪೈಕಿ, ವಿವಿಧ ಕಾರಣಗಳಿಗಾಗಿ 16 ಸಾವಿರ ಬಾಕಿ ಇವೆ. ಉಳಿದ 1.10 ಲಕ್ಷ ಅರ್ಜಿಗಳು ಪಾವತಿಯಾಗುವ ಪ್ರಕ್ರಿಯೆಯಲ್ಲಿವೆ’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಎಲ್. ಹೇಮಂತ ಕುಮಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಆಟೊವನ್ನು ಬಾಡಿಗೆಗೆ ಪಡೆದು ಚಾಲನೆ ಮಾಡುವವರು ಅನೇಕರಿದ್ದಾರೆ. ಪರವಾನಗಿ ಮತ್ತು ಬ್ಯಾಡ್ಜ್‌ ಹೊಂದದವರ ಸಂಖ್ಯೆಯೂ ಹೆಚ್ಚಾಗಿದೆ. ಇವರು ಪರಿಹಾರದ ವ್ಯಾಪ್ತಿಗೆ ಬರುವುದಿಲ್ಲ. ಅರ್ಜಿ ಸಲ್ಲಿಕೆಗೆ ಜುಲೈ 31ರವರೆಗೆ ಅವಕಾಶವಿದೆ’ ಎಂದು ಹೇಳಿದರು.

ಕಠಿಣ ಷರತ್ತುಗಳು: ‘ಬಹುತೇಕ ಆಟೊ ಮತ್ತು ಟ್ಯಾಕ್ಸಿ ಚಾಲಕರ ಬಳಿ ನಿಯಮಾನುಸಾರ ಇರಬೇಕಾದ ದಾಖಲೆಗಳಿಲ್ಲ. ಹಾಗಾಗಿ ಸರ್ಕಾರ ವಿಧಿಸಿರುವ ಷರುತ್ತುಗಳು ಅವರು ಪೂರೈಸಲು ಸಾಧ್ಯವಾಗಿಲ್ಲ. ಪರಿಹಾರ ಪಡೆಯಲು ಚಾಲಕರು 2020ರ ಮಾರ್ಚ್‌ 24ರೊಳಗೆ ಚಾಲನಾ ಪರವಾನಗಿ ಹಾಗೂ ಬ್ಯಾಡ್ಜ್‌ ಹೊಂದಿರಬೇಕು. ವಾಹನದ ಸುಸ್ಥಿತಿ (ಫಿಟ್‌ನೆಸ್‌) ಪ್ರಮಾಣ ಪತ್ರ ಇರಬೇಕು. ಹಳದಿ ಬೋರ್ಡ್‌ನ ಸ್ವಂತ ಆಟೊ ಅಥವಾ ಟ್ಯಾಕ್ಸಿ ಹೊಂದಿರಬೇಕು’ ಎಂದು ಹುಬ್ಬಳ್ಳಿನಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತವಾಡಮಠ ತಿಳಿಸಿದರು.

‘ಅರ್ಹರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿಯೊಂದಿಗೆ ಬ್ಯಾಂಕ್ ಖಾತೆ ವಿವರ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಅನುಮೋದಿಸಿದ ಬಳಿಕ, ಅರ್ಹರ ಬ್ಯಾಂಕ್‌ ಖಾತೆಗೆ ಪರಿಹಾರದ ಹಣ ನೇರವಾಗಿ ಸಂದಾಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.