ADVERTISEMENT

ಸರ್ಕಾರ ವೇತನ ತಾರತಮ್ಯ ನಿವಾರಿಸಲಿ: ತಿಮ್ಮಯ್ಯ ಪುರ್ಲೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 9:14 IST
Last Updated 14 ಅಕ್ಟೋಬರ್ 2018, 9:14 IST
ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಚಾರ್ಯರ ಸಂಘದ ಸದಸ್ಯರ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿದರು. ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಚಾರ್ಯರ ಸಂಘದ ಸದಸ್ಯರ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ರಾಜ್ಯದ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ಬೇರೆ ರಾಜ್ಯಗಳಿಗಿಂತ ಹೆಚ್ಚಿನ ವೇತನ ನೀಡಲಾಗುತ್ತಿದೆ ಎಂದು ಸರ್ಕಾರ ವಾದಿಸುತ್ತಿದೆ. ವಾಸ್ತವದಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಉಪನ್ಯಾಸಕರಿಗೆ ಹೋಲಿಸಿದರೆ ಶೇ22ರಷ್ಟು ಕಡಿಮೆ ವೇತನವನ್ನು ನಾವು ಪಡೆಯುತ್ತಿದ್ದೇವೆ’ ಎಂದು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಚಾರ್ಯರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಸಂಘದ ಧಾರವಾಡ, ಗದಗ, ಹಾವೇರಿ, ಬೆಳಗಾವಿ ಉತ್ತರ ಕನ್ನಡ ಜಿಲ್ಲಾ ಘಟಕಗಳ ಸದಸ್ಯರ ಸಭೆಯಲ್ಲಿ ಮಾತನಾಡಿದರು. ‘ಐದನೇ ವೇತನ ಆಯೋಗದ ಶಿಫಾರಸುಗಳಿಗೆ ಶೇ30ರಷ್ಟು ಹೆಚ್ಚುವರಿ ಸೇರಿಸಿ ಆರನೇ ವೇತನ ಆಯೋಗ ವರದಿ ನೀಡಿದೆ. ಈ ಕೆಲಸ ಮಾಡಲು ಆಯೋಗವೇ ಬೇಕಿರಲಿಲ್ಲ. ಉಪನ್ಯಾಸಕರಿಗೆ ಆಗಿರುವ ವೇತನ ತಾರತಮ್ಯ ನಿವಾರಣೆ ಮಾಡಬೇಕು ಎಂಬ ನಮ್ಮ ಬೇಡಿಕೆಯನ್ನು ಅದು ಪರಿಗಣಿಸಿಲ್ಲ’ಎಂದರು.

‘ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದ ನಂತರ, 2008ರ ನಂತರ ನೇಮಕವಾದ ಮತ್ತು ಬಡ್ತಿ ಹೊಂದಿದ ಉಪನ್ಯಾಸಕರಿಗೆ ಎಕ್ಸ್‌ಗ್ರೇಷಿಯಾ ನೀಡಿಲ್ಲ. ಹಿಂದೆ ನೀಡಿದ್ದ ಎಕ್ಸ್‌ಗ್ರೇಷಿಯಾವನ್ನು ಸಹ ಹಿಂದಕ್ಕೆ ಪಡೆಯುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಕಳೆದ ಆಗಸ್ಟ್‌ ತಿಂಗಳಿನಲ್ಲಿ ನಡೆದ ಸಭೆಯಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಬೇಡಿಕೆ ಈಡೇರಿಸುವ ಭರವಸೆಯನ್ನು ಅವರು ನೀಡಿದ್ದರು. ಆದರೆ ಈ ವರೆಗೆ ಆ ಬಗ್ಗೆ ಕ್ರಮ ಕೈಗೊಂಡಿಲ್ಲ’ ಎಂದರು.

ADVERTISEMENT

‘ಈ ಹಿಂದೆ ಧರಣಿ ನಡೆಸಿದಾಗ ವಿದ್ಯಾರ್ಥಿಗಳಿಗೆ ತೊಂದರೆ ಆಯಿತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ದರಿಂದ ರಜೆಯ ದಿನಗಳಲ್ಲಿ ಅಂದರೆ ಇದೇ 22ರಿಂದ 28ರ ವರೆಗೆ ಬೆಂಗಳೂರಿನಲ್ಲಿ ಧರಣಿ ನಡೆಸಲಾಗುವುದು’ ಎಂದು ಹೇಳಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಎಸ್‌.ಎಸ್. ದೊಡ್ಡಮನಿ, ಧಾರವಾಡ ಘಟಕದ ಅಧ್ಯಕ್ಷ ಜಿ.ಬಿ. ತಹಶೀಲ್ದಾರ, ಪ್ರಧಾನ ಕಾರ್ಯದರ್ಶೀ ಎಂ.ಬಿ. ಕಂಬಳಿ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ ಗಾಂವ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.