ADVERTISEMENT

ಸಹಸ್ರಾರ್ಜುನ ಮಹಾರಾಜರ ಅದ್ಧೂರಿ ಜಯಂತಿ

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ; ಗಮನ ಸೆಳೆದ ವೇಷಧಾರಿಗಳು; ದೇಗುಲದಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 6:45 IST
Last Updated 1 ನವೆಂಬರ್ 2022, 6:45 IST
ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಸೋಮವಾರ ಎಸ್‌ಎಸ್‌ಕೆ ಸಮಾಜದಿಂದ ಮೆರವಣಿಗೆ ನಡೆಯಿತು. ವಿವಿಧ ವೇಷಗಳಲ್ಲಿ ಕಾಣಿಸಿಕೊಂಡ ಮಕ್ಕಳು ಗಮನ ಸೆಳೆದರುಪ್ರಜಾವಾಣಿ ಚಿತ್ರ
ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಸೋಮವಾರ ಎಸ್‌ಎಸ್‌ಕೆ ಸಮಾಜದಿಂದ ಮೆರವಣಿಗೆ ನಡೆಯಿತು. ವಿವಿಧ ವೇಷಗಳಲ್ಲಿ ಕಾಣಿಸಿಕೊಂಡ ಮಕ್ಕಳು ಗಮನ ಸೆಳೆದರುಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಎಸ್‌ಎಸ್‌ಕೆ ಸಮಾಜದ ಕುಲಪುರುಷ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಸೋಮವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯನ್ನು ರಥದಲ್ಲಿಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ದಾಜಿಬಾನಪೇಟೆಯ ತುಳಜಾಭವಾನಿ ದೇವಸ್ಥಾನದ ಎದುರು ಪೊಲೀಸ್ ಕಮಿಷನರ್‌ ಲಾಭೂರಾಮ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಜಗದೀಶ ಶೆಟ್ಟರ್‌ ಪೂಜೆ ಸಲ್ಲಿಸಿದರು. ಬೆಳಿಗ್ಗೆ ದೇವಸ್ಥಾನದಲ್ಲಿ ಸಹಸ್ರಾರ್ಜುನ ಮಂಗಲಕಾರ್ಯ ಸಮಿತಿ ಸದಸ್ಯರು ಬೆಳ್ಳಿ ಮೂರ್ತಿಗೆ ಅಭಿಷೇಕ ನೆರವೇರಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ದೇವಸ್ಥಾನದ ಮುಂಭಾಗದಿಂದ ಆರಂಭವಾದ ಮೆರವಣಿಗೆ ದಾಜಿಬಾನಪೇಟೆ, ಚನ್ನಮ್ಮ ವೃತ್ತ, ಲ್ಯಾಮಿಂಗ್ಟನ್‌ ರಸ್ತೆ, ಕೊಪ್ಪಕರ ರಸ್ತೆ, ದುರ್ಗದ ಬೈಲ್‌ ಮೂಲಕ ಸಾಗಿ ಮರಳಿ ದೇವಸ್ಥಾನ ತಲುಪಿತು. ತಲೆಗೆ ಕೇಸರಿ ರುಮಾಲು ಸುತ್ತುಕೊಂಡು ಪುರುಷರು, ಜರಿ ಸೀರೆಯುಟ್ಟು ಮಹಿಳೆಯರು ಸಹಸ್ರಾರ್ಜುನ ಮಹಾರಾಜ್‌ ಕೀ ಜೈ ಎಂದು ಘೋಷಣೆ ಕೂಗುತ್ತ ಸಾಗಿದರು. ವಿವಿಧ ಪೌರಾಣಿಕ ಪಾತ್ರಗಳ ವೇಷ ಭೂಷಣ ಧರಿಸಿದ್ದ ಮಕ್ಕಳು ಗಮನ ಸೆಳೆದರು.

ADVERTISEMENT

ಸಾಧಕರಿಗೆ ಸನ್ಮಾನ: ಸಂಜೆ ದೇವಸ್ಥಾನದ ಎದುರಿನ ಮಂಟಪದಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಸ್‌ಎಸ್‌ಕೆ ಸಮಾಜದ ನೇತ್ರಾವತಿ ಬದ್ದಿ, ಶ್ರದ್ದಾ, ಶಿಲ್ಪಾ ಪವಾರ, ಸೋನಲ ಅವರನ್ನು ಸನ್ಮಾನಿಸಲಾಯಿತು. ಮೂರು ಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ಹಾಗೂ ಸಮಾಜದ ಹುಬ್ಬಳ್ಳಿ–ಧಾರವಾಡ ಘಟಕದ ಅಧ್ಯಕ್ಷ ಸತೀಶ ಜಿ. ಮೆಹರವಾಡೆ ಅಧ್ಯಕ್ಷತೆ ವಹಿಸಿದ್ದರು.

ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಕಾಟವೆ, ಮಾಜಿ ಧರ್ಮದರ್ಶಿಗಳಾದ ಎಫ್‌.ಕೆ. ದಲಬಂಜನ, ನೀಲಕಂಠಸಾ ಜಡಿ, ಮಾಜಿ ಮೇಯರ್‌ಗಳಾದ ಸರಳಾ ಭಾಂಡಗೆ, ಡಿ.ಕೆ. ಚವ್ಹಾಣ, ಉಪ ಮುಖ್ಯ ಧರ್ಮದರ್ಶಿ ಭಾಸ್ಕರ ಎನ್. ಜಿತೂರಿ, ಗೌರವ ಕಾರ್ಯದರ್ಶಿ ನಾರಾಯಣ ಖೋಡೆ, ಉಪ ಮುಖ್ಯ ಧರ್ಮದರ್ಶಿ ಕಿರಣ ಪೂಜಾರಿ, ಸಂಚಾಲಕ ಕಾಶೀನಾಥ ಖೋಡೆ, ಮಹಿಳಾ ಸಂಚಾಲಕಿ ರೂಪಮಾಲಾ ಬಾಕಳೆ,ವಿಠ್ಠಲ ಲದವಾ, ರಂಗಾ ಬದ್ದಿ,ಉದ್ಯಮಿಗಳಾದ ಶ್ರೀಧರ ಟಿ. ಪವಾರ, ಯೋಗೇಶ ಎ. ಹಬೀಬ, ರಮೇಶ ಬುರಬುರೆ ಇದ್ದರು.

ಚಿತ್ರ ತೆರವಿಗೆ ಖಂಡನೆ: ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಕೊಠಡಿಯಲ್ಲಿ ಸಹಸ್ರಾರ್ಜುನ ಮಹಾರಾಜರ ಚಿತ್ರ ತೆರವುಗೊಳಿಸಿರುವುದನ್ನು ಎಸ್‌ಎಸ್‌ಕೆ ಚಿಂತನ ಮಂಥನ ಸಮಿತಿ ಖಂಡಿಸಿದೆ. ಕೂಡಲೆ, ಎರಡೂ ಕಡೆ ಚಿತ್ರ ಹಾಕಬೇಕು ಎಂದು ಸಮಿತಿ ಅಧ್ಯಕ್ಷ ಹನುಮಂತ ನಿರಂಜನ ಒತ್ತಾಯಿಸಿದ್ದಾರೆ.

‘ಸಮಾಜಕ್ಕೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ’

ಹುಬ್ಬಳ್ಳಿ: ‘ಎಸ್‌ಎಸ್‌ಕೆ ಸಮಾಜವು ಹಿಂದಿನಿಂದಲೂ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದ್ದು, ಸಮಾಜಕ್ಕೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಲಾಗುವುದು’ ಎಂದು ಶಾಸಕ ಜಗದೀಶ ಶೆಟ್ಟರ್‌ ಭರವಸೆ ನೀಡಿದರು.

ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಹಸ್ರಾರ್ಜುನ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಿಂದುತ್ವದ ವಿಚಾರ ಬಂದಾಗ ಸಮಾಜ ಯಾವಾಗಲೂ ಮುಂದೆ ಇರುತ್ತದೆ’ ಎಂದರು.

ಸಮಾಜದ ಹಿರಿಯ ಮುಖಂಡ ನಿಲಕಂಠಸಾ ಜಡಿ ಮಾತನಾಡಿ, ‘ಬಿಜೆಪಿಗೆ ನಮ್ಮ ಸಮಾಜ ರಾಜಕೀಯವಾಗಿ ಸಹಕಾರ ನೀಡುತ್ತಾ ಬಂದಿದೆ. ಸದ್ಯ ಪಕ್ಷವು ಸಮಾಜವನ್ನು ಕಡೆಗಣಿಸುತ್ತಿದೆ.‌ ಮುಂಬರುವ ದಿನಗಳಲ್ಲಿ ನಮಗೆ ಸೂಕ್ತ ಸ್ಥಾನಮಾನ ನೀಡಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮುಖಂಡರಾದ ಮಲ್ಲಿಕಾರ್ಜುನ ಸಾಹುಕಾರ, ನಾಗೇಶ ಕಲಬುರ್ಗಿ, ವೀರಭದ್ರಪ್ಪ ಹಾಲಹರವಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ಡಿ.ಕೆ. ಚವ್ಹಾಣ, ಹನಮಂತ ನಿರಂಜನ, ರವಿ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.