
ಅಳ್ನಾವರ: ತಾಲ್ಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ಎರಡು ದಿನಗಳ ಕಾಲ 26ನೇ ಏಕನಾಥ ಸೃಷ್ಟಿ ಉತ್ಸವ ಕಾರ್ಯಕ್ರಮ ಶ್ರದ್ಧಾ, ಭಕ್ತಿಯಿಂದ ನಡೆಯಿತು.
ಬುಧವಾರ ಜ್ಞಾನೇಶ್ವರ ಪಾರಾಯಣ, ತುಕಾರಾಮ ಭಜನೆ, ನಾಮಜಪ, ಪ್ರವಚನ, ಹರಿಪಾಠ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕಾಳಗಿನಕೊಪ್ಪ ಗ್ರಾಮದ ಹರಿ ಮಂದಿರ ಮರಾಠಾ ಭಜನಾ ಮಂಡಳಿ, ಸಿದ್ದರೂಢ ಭಜನಾ ಮಂಡಳಿ, ಮರಾಠಾ ಭಜನಾ ಮಂಡಳಿ ಅವರು ಭಜನೆ ಭಕ್ತಿ ಲೋಕ ಸೃಷ್ಟಿಸಿತ್ತು. ಗುರುವಾರ ಬೆಳಿಗ್ಗೆ ವಿಠ್ಠಲ ರುಕ್ಮಾಯಿ ಮಂದಿರದಲ್ಲಿ ವಿಶೇಷ ಪೂಜೆ ನಡೆಯಿತು. ಗೋದಳ್ಳಿ, ಗೋದಗೇರಿ, ತಾವರಗಟ್ಟಿ, ನಿರಲಗಾ ಗ್ರಾಮದಿಂದ ಆಗಮಿಸಿದ ಸಂತರು, ಹಿರಿಯರು ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೇರವೇರಿಸಿದರು.
ಚಂದ್ರಕಾಂತ ತಾಂಬಿಟಕರ ಮಹಾರಾಜರು ಕೀರ್ತನೆ ನಡೆಸಿದರು. ದಿಂಡಿ ಉತ್ಸವ ಪ್ರಯುಕ್ತ ಪಲ್ಲಕಿ ಸೇವೆ ಗ್ರಾಮದ ಪ್ರತಿ ಗಲ್ಲಿಯಲ್ಲಿ ಸಂಚರಿಸಿತು. ಪಲಕ್ಕಿ ಬರುವ ಬೀದಿ ಶುಚಿಗೊಳಿಸಿ ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ಪಲ್ಲಕ್ಕಿ ಮನೆ ಬಾಗಿಲಿಗೆ ಬಂದಾಗ ನೀರು ಹಾಕಿ, ಆರತಿ ಮಾಡಿ ಭಕ್ತಿ ಸೇವೆ ಸಲ್ಲಿಸಲಾಯಿತು,
ಮಧ್ಯಾಹ್ನ ಅನ್ನ ಸಂತರ್ಪನೆ ನಡೆಯಿತು. ಅಳ್ನಾವರ, ಕಡಬಗಟ್ಟಿ ಮುಂತಾದೆಡೆಯಿಂದ ಸಂತರು, ವಾರಕರಿ ಮಂಡಳಿಯವರು ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.