ADVERTISEMENT

ಯೋಧ ದ್ಯಾಮಣ್ಣನಿಗೆ ಅದ್ಧೂರಿ ಸ್ವಾಗತ

ಬ್ಯಾಹಟ್ಟಿ: ಗ್ರಾಮದ ಬೀದಿಗಳಲ್ಲಿ ಮೆರವಣಿಗೆ; ಮಹಿಳೆಯರಿಂದ ಆರತಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 3:28 IST
Last Updated 5 ಏಪ್ರಿಲ್ 2022, 3:28 IST
ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಮರಳಿದ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ದ್ಯಾಮಣ್ಣ ಹನುಮಂತಪ್ಪ ವಿಟ್ಟಣ್ಣವರ ಅವರಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಸ್ವಾಗತಿಸಿದರು
ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಮರಳಿದ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ದ್ಯಾಮಣ್ಣ ಹನುಮಂತಪ್ಪ ವಿಟ್ಟಣ್ಣವರ ಅವರಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಸ್ವಾಗತಿಸಿದರು   

ಹುಬ್ಬಳ್ಳಿ: ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಮರಳಿದ, ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ದ್ಯಾಮಣ್ಣ ಹನುಮಂತಪ್ಪ ವಿಟ್ಟಣ್ಣವರ ಅವರನ್ನು ಗ್ರಾಮಸ್ಥರು ಸೋಮವಾರ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಸ್ವಾಗತಿಸಿದರು. ಗ್ರಾಮದ ಹಿರಿಯರು ರೈಲ್ವೆ ನಿಲ್ದಾಣದಲ್ಲೇ ದ್ಯಾಮಣ್ಣ ಅವರನ್ನು ಬರಮಾಡಿಕೊಂಡರು.

ನಂತರ ಗ್ರಾಮಕ್ಕೆ ಬಂದ ಯೋಧನಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಅಲಂಕೃತ ಟ್ರಾಕ್ಟರ್‌ನಲ್ಲಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಯುವಕರು ಬೈಕ್ ರ‍್ಯಾಲಿ ಮಾಡಿದರು. ಮೆರವಣಿಗೆಯುದ್ದಕ್ಕೂ ಯೋಧನಿಗೆ ಜೈಕಾರ ಹಾಕಿದರು.

ಬಸವೇಶ್ವರ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದ್ಯಾಮಣ್ಣ, ‘ದೇಶಸೇವೆಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಎಲ್ಲರೂ ತಮ್ಮ ತಮ್ಮ ನೆಲೆಯಲ್ಲೇ ದೇಶಸೇವೆ ಮಾಡಿ, ಈ ಮಣ್ಣಿನ ಋಣ ತೀರಿಸಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಆಗಲೇ ನಮ್ಮ ಬದುಕು ಸಾರ್ಥಕವಾಗುತ್ತದೆ’ ಎಂದರು.

ADVERTISEMENT

ಗ್ರಾಮದ ಸುತ್ತಮುತ್ತಲಿನ 50 ಯೋಧರನ್ನು ಸನ್ಮಾನಿಸಲಾಯಿತು. ಸಾನ್ನಿಧ್ಯವನ್ನು ಮರುಳಸಿದ್ಧ ಸ್ವಾಮೀಜಿ, ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುಳ್ಳದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ನರಗುಂದದ ಶ್ರೀಕಾರ ದೇವರು ಹಿರೇಮಠ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಯೋಧ ದ್ಯಾಮಣ್ಣ ಅವರ ತಾಯಿ ಸಾವಕ್ಕ ವಿಟ್ಟಣ್ಣವರ, ಗಂಗಾಧರ ಹುಬ್ಬಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ ಯಡ್ರಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.