ಧಾರವಾಡ: ‘ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ‘ಹೆಸರು’ ಮತ್ತು ‘ಮೆಂತ್ಯೆ' ಬೀಜಗಳನ್ನು ‘ಆಕ್ಸಿಯಂ–4’ ಮಿಷನ್ ಯೋಜನೆಗಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ರವಾನಿಸಲಾಗಿದೆ. ‘ಬಾಹ್ಯಾಕಾಶದಲ್ಲಿ ಸಲಾಡ್ ಬೀಜಗಳ ಮೊಳಕೆ;ಗಗನಯಾತ್ರಿಗಳ ಆಹಾರ ಪೋಷಣೆ’ ಸಂಶೋಧನೆ ನಿಟ್ಟಿನಲ್ಲಿ ಪರೀಕ್ಷಾರ್ಥವಾಗಿ ರವಾನಿಸಲಾಗಿದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ತಿಳಿಸಿದರು.
‘ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಈ ಬೀಜಗಳಿಗೆ ನೀರು ಹಾಕುತ್ತಾರೆ. ಎರಡರಿಂದ ನಾಲ್ಕು ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಮೊಳಕೆ ಕಾಳುಗಳನ್ನು ಬಾಹ್ಯಾಕಾಶದಲ್ಲಿ ಶೈತ್ಯ ಘಟಕದಲ್ಲಿ ಇಟ್ಟು ನಂತರ ಭೂಮಿಗೆ ಹಿಂದಿರುಗಿಸುತ್ತಾರೆ’ ಎಂದರು.
‘ಮೊಳಕೆ ಕಾಳುಗಳನ್ನು ವಾಪಸ್ ಭೂಮಿಗೆ ತಂದ ನಂತರ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲಾಗುವುದು. ಮೊಳಕೆ ಪ್ರಮಾಣ, ಅವುಗಳ ಪೋಷಕಾಂಶ ಗುಣಮಟ್ಟ, ಫೈಟೋಹಾರ್ಮೊನ್‌ಗಳ ಚಟುವಟಿಕೆ ಹಾಗೂ ಜೀವಸೂತ್ರ (ಟ್ರಾನ್ಸ್ ಕ್ರಿಪ್ಟೋಮ್) ಪರೀಕ್ಷಿಸಿ ವಿಶ್ಲೇಷಿಸಲಾಗುವುದು. ಅಲ್ಲದೇ ಮೊಳಕೆಯ ಮೇಲೆ ಮೈಕ್ರೋಬಿಯಲ್ ಬೆಳವಣಿಗೆ ಅಧ್ಯಯನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಈ ಸಂಶೋಧನಯು ಭವಿಷ್ಯದಲ್ಲಿ ಅಂತರಿಕ್ಷಯಾನದಲ್ಲಿ ಭಾರತೀಯರ ಆಹಾರದ ಭಾಗವಾಗಬಲ್ಲ ಆರೋಗ್ಯಕರ ಸಲಾಡ್ ತರಕಾರಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೊಳಕೆಯೊಡೆಯುವ ಬೀಜಗಳನ್ನು ಬೆಳೆಸಲು ಕೇವಲ ಕಂಟೇನರ್, ನೀರು ಇದ್ದರೆ ಸಾಕು. ಮೊಳಕೆ ಕಾಳುಗಳು ಪೋಷಕಾಂಶಭರಿತವಾಗಿರುತ್ತವೆ. ಗಗನಯಾನ ಮಿಷನ್ ಭವಿಷ್ಯದ ಯಾತ್ರಿಕರ ಆಹಾರ ಗಮನದಲ್ಲಿಟ್ಟುಕೊಂಡು ಈ ಸಂಶೋಧನೆಗೆ ಹೆಸರು, ಮೆಂತ್ಯೆ ಬೀಜಗಳ ಮೊಳಕೆ ಅಧ್ಯಯನ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.
‘ಮೆಂತ್ಯೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಎಲುಬಿನ ಆರೋಗ್ಯ ಉತ್ತಮಗೊಳಿಸುತ್ತದೆ. ಮೂತ್ರಕೋಶದಲ್ಲಿ ಕಲ್ಲು ರಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗಗನಯಾತ್ರಿಗಳ ಅರೋಗ್ಯದ ದೃಷ್ಟಿಯಿಂದ ಸಂಶೋಧನೆಗೆ ಈ ಬೀಜಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.