ಹುಬ್ಬಳ್ಳಿಯ ಲಿಂಗರಾಜನಗರದ ಬಳಿಯ ರಾಜಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿವೆ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ: ನಗರದಲ್ಲಿನ ರಾಜಕಾಲುವೆ ಹಾದು ಹೋಗುವ ಮಾರ್ಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಿರ್ಮಿಸಲಾಗುತ್ತಿರುವ ಗ್ರೀನ್ ಮೊಬಿಲಿಟಿ ಕಾರಿಡಾರ್ (ಹಸಿರು ಸಂಚಾರ ಪಥ) ಯೋಜನೆ ಪೂರ್ಣಗೊಳ್ಳುವ ಮೊದಲೇ ಹಾಳಾಗುತ್ತಿದೆ. ಕಾರಿಡಾರ್ ಅಕ್ಕಪಕ್ಕ ಗಿಡಗಂಟಿಗಳು ಬೆಳೆದಿದ್ದು, ನಿರ್ವಹಣೆ ಸಮಸ್ಯೆ ಎದುರಾಗಿದೆ.
ಉಣಕಲ್ ಕೆರೆಯಿಂದ ಹಳೇ ಹುಬ್ಬಳ್ಳಿವರೆಗಿನ 6 ಕಿ.ಮೀ. ರಾಜಕಾಲುವೆಯನ್ನು ಅಭಿವೃದ್ಧಿಪಡಿಸಲು ₹130 ಕೋಟಿ ವೆಚ್ಚ ಮಾಡಲಾಗುತ್ತಿದೆ. ಮೂರು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಮೊದಲನೇ ಹಂತದಲ್ಲಿ 700 ಮೀಟರ್ ಹಾಗೂ ಎರಡನೇ ಹಂತದಲ್ಲಿ 5 ಕಿ.ಮೀ., ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮೂರನೇ ಹಂತದ ಕಾಮಗಾರಿ ನಡೆಯುತ್ತಿದೆ.
ಕಾರಿಡಾರ್ ನಿರ್ವಹಣೆಯಿಲ್ಲದೆ ಹಾಳಾಗುತ್ತಿದೆ. ನಾಲಾ ಹಾಗೂ ಕಾರಿಡಾರ್‌ನಲ್ಲಿ ಗಿಡಗಂಟಿಗಳು, ಕಳೆಗಳು ಮತ್ತು ಅನಗತ್ಯ ಸಸ್ಯಗಳು ಬೆಳೆದಿವೆ. ಕೆಲವರು ಒಳಚರಂಡಿ ಮೂಲಕ ಕೊಳಚೆ ನೀರನ್ನು ನೇರವಾಗಿ ನಾಲಕ್ಕೆ ಬಿಡುತ್ತಿದ್ದಾರೆ. ತ್ಯಾಜ್ಯ ಹಾಗೂ ಕಸವನ್ನು ನಾಲಕ್ಕೆ ತಂದು ಸುರಿಯುವುದರಿಂದ, ಸುತ್ತಲಿನ ವಾತಾವರಣವೆಲ್ಲ ದುರ್ವಾಸನೆಯಿಂದ ಕೂಡಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಹೆಚ್ಚಾಗಿ, ಅಕ್ಕಪಕ್ಕದ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ಕಾರಿಡಾರ್‌ನಲ್ಲಿಯೇ ಗಿಡಗಳು ಬೆಳೆದಿರುವುದಿಂದ, ಓಡಾಡಲು ಸಹ ಸಮಸ್ಯೆಯಾಗುತ್ತಿದೆ.
‘ಆರಂಭದಲ್ಲಿ ವಿಡಿಯೊ ಮೂಲಕ ರಾಜಕಾಲುವೆ ಅಭಿವೃದ್ಧಿ, ಹಸಿರು ಸಂಚಾರ ಪಥ ಎಂದು ಸಾರ್ವಜನಿಕರನ್ನು ನಂಬಿಸಿ, ಕೋಟಿ ಹಣ ಸುರಿದರು. ಆದರೆ, ಉದ್ದೇಶಿತ ಯೋಜನೆಯಂತೆ ಕಾಮಗಾರಿ ನಡೆದಿಲ್ಲ. ಅಲ್ಲಲ್ಲಿ ತ್ಯಾಜ್ಯದ ನೀರು ಶುದ್ಧೀಕರಿಸಲು ಮಾಡಿದ ಎಸ್‌ಟಿಪಿ ಟ್ಯಾಂಕ್‌ಗಳು ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಾಮಗಾರಿ ಸಂದರ್ಭದಲ್ಲಿಯೇ ನಿರ್ವಹಣೆ ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ’ ಶಿರೂರಪಾರ್ಕ್ ನಿವಾಸಿ ವೆಂಕಟರಡ್ಡಿ ಕಟೀಲಾಲ ಹೇಳುತ್ತಾರೆ.
‘ರಾಜ ನಾಲಾದಲ್ಲಿ ದೊಡ್ಡ ಪೊದೆಗಳು ಬೆಳೆದಿವೆ. ಸದಾ ದುರ್ವಾಸನೆ ಇರುವುದರಿಂದ ಕಾರಿಡಾರ್‌ನಲ್ಲಿ ನಡೆಯಲು ಸಹ ಕಷ್ಟವಾಗುತ್ತಿದೆ. ನಾಲಾವನ್ನು ಅಭಿವೃದ್ಧಿಯೇನೋ ಪಡಿಸಲಾಗಿದೆ. ಆದರೆ, ನಿರೀಕ್ಷಿತ ಗುರಿ ತಲುಪಿಲ್ಲ. ಅಲ್ಲದೆ, ಸಾರ್ವಜನಿಕರು ಸಹ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು’ ಎಂದು ಲಿಂಗರಾಜ ನಗರದ ನಿವಾಸಿ ರೇವಣ್ಣ ಗುಡಿ ಹೇಳಿದರು.
ಮಳೆಗಾಲದ ಸಂದರ್ಭದಲ್ಲಿ ನಾಲಾ ತುಂಬಿ ಹರಿಯುವುದನ್ನು ತಡೆಯಲು, ಅಗತ್ಯವಿದ್ದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಕಾರಿಡಾರ್‌ನಲ್ಲಿ ಸೈಕಲ್ ಹೊರತುಪಡಿಸಿ ಮೋಟಾರ್ ವಾಹನಗಳಿಗೆ ಅವಕಾಶ ನೀಡದಂತೆ ನಿಷೇಧಿಸಲಾಗಿದೆ. ಹಸಿರು ಸಂಚಾರ ಪಥ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಾಲಾಕ್ಕೆ ಕೊಳಚೆ ನೀರು ನೇರವಾಗಿ ಬಿಡುವುದನ್ನು ತಡೆಯಲು, ಭೂಗತ ಒಳಚರಂಡಿ ಮಾರ್ಗವನ್ನು ಸಹ ಅಳವಡಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳುತ್ತಾರೆ.
‘ಸಮಸ್ಯೆಗೆ ಶೀಘ್ರ ಪರಿಹಾರ’
‘ನಾಲಾದ ಉದ್ದಕ್ಕೂ ಯುಜಿಡಿ ಮಾರ್ಗ ಅಭಿವೃದ್ಧಿಪಡಿಸಲಾಗಿದೆ. ನಾಲಾದ ಅಕ್ಕಪಕ್ಕ ಇರುವ ಚರಂಡಿ ಮಾರ್ಗ ಸಂಪರ್ಕವನ್ನು ಸಹ ಯುಜಿಡಿಗೆ ಸಂಪರ್ಕಿಸಲಾಗಿದೆ. ಆದರೆ ಹೊಸದಾಗಿ ನಿರ್ಮಿಸಿರುವ ಕೆಲವು ಮನೆಗಳು ಕೊಳಚೆ ನೀರನ್ನು ನೇರವಾಗಿ ನಾಲಾಕ್ಕೆ ಬಿಡುತ್ತಿವೆ. ಇದರಿಂದ ಸಮಸ್ಯೆ ಎದುರಾಗುತ್ತಿದ್ದು ಶೀಘ್ರ ಸರಿಪಡಿಸಲಾಗುವುದು. ನಾಲಾದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಹಾಗೂ ಪೊದೆಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಘಾಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.